ಸೌತ್ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರಗಳಾದ 'ತಲೈವರ್ 171' (ತಾತ್ಕಾಲಿಕ ಶೀರ್ಷಿಕೆ) ಮತ್ತು 'ವೆಟ್ಟೈಯನ್' ಸಲುವಾಗಿ ಸುದ್ದಿಯಲ್ಲಿದ್ದಾರೆ. ತಲೈವರ್ 171ಗೆ ಸಂಬಂಧಿಸಿದಂತೆ ಒಂದು ಕುತೂಹಲಕಾರಿ ಸುದ್ದಿ ಹೊರಬಿದ್ದಿದೆ. ಮಾಧ್ಯಮ ವರದಿಗಳ ಪ್ರಕಾರ, ರಜನಿಕಾಂತ್ ನಟನೆಯ ಈ ಚಿತ್ರದಲ್ಲಿ ಶಾರುಖ್ ಖಾನ್ ಕಾಣಿಸಿಕೊಳ್ಳಲಿದ್ದಾರೆ.
ಈ ಹಿಂದೆ ರಾ-ಒನ್ ಚಿತ್ರದಲ್ಲಿ ಶಾರುಖ್ ಮತ್ತು ರಜನಿಕಾಂತ್ ತೆರೆ ಹಂಚಿಕೊಂಡಿದ್ದರು. ರಜನಿಕಾಂತ್, ಎಸ್ಆರ್ಕೆ ಮುಖ್ಯಭೂಮಿಕೆಯ ರಾ-ಒನ್‌ನಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು. ಇದೀಗ ಶಾರುಖ್ ಖಾನ್ 'ತಲೈವರ್ 171'ರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಆದಾಗ್ಯೂ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.
ವಿಕ್ರಮ್, ಮಾಸ್ಟರ್ ಮತ್ತು ಲಿಯೋನಂತಹ ಸೂಪರ್ ಹಿಟ್ ಚಿತ್ರಗಳ ನಂತರ ಲೋಕೇಶ್ ಕನಕರಾಜ್ ಅವರು ಭಾರತೀಯ ಚಿತ್ರರಂಗದ ಹೆಸರಾಂತ ರಜನಿಕಾಂತ್ ಅವರ ಚಿತ್ರ ನಿರ್ದೇಶಿಸಲು ಸಜ್ಜಾಗಿದ್ದಾರೆ. ರಜನಿಕಾಂತ್ ಅವರೊಂದಿಗೆ ಮಾಡುತ್ತಿರುವ ಚೊಚ್ಚಲ ಚಿತ್ರವಿದು. ಸದ್ಯ ಈ ಚಿತ್ರದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ರಜನಿಕಾಂತ್, ಶಾರುಖ್ ಖಾನ್ ಮತ್ತು ಲೋಕೇಶ್ ಕನಕರಾಜ್ ಕಾಂಬೋದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸಂಚಲನ ಮೂಡಿಸುವ ಸಾಧ್ಯತೆಗಳಿವೆ. ಆದರೆ ಈ ಬಗ್ಗೆ ನಿರ್ಮಾಪಕರಿಂದ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ.