ತೆಲಂಗಾಣದ ಮಹಬೂಬ್ನಗರದಲ್ಲಿ ಕಳೆದ ವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ತ್ರಿನಯನಿ ತೆಲುಗು ಧಾರಾವಾಹಿ ಖ್ಯಾತಿಯ ಪವಿತ್ರಾ ಜಯರಾಮ್ ಅವರ ಸ್ನೇಹಿತ ಚಂದ್ರಕಾಂತ್ ಅಲಿಯಾಸ್ ಚಂದು ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಂಗಾರೆಡ್ಡಿ ಜಿಲ್ಲೆಯ ನರಸಿಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ಕಾಪುರ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಸೂಕ್ತ ಕಾರಣ ತಿಳಿದು ಬಂದಿಲ್ಲ.
ಮೇ 12 ರಂದು ಅಪಘಾತದಲ್ಲಿ ನಟಿ ಪವಿತ್ರಾ ಜಯರಾಮ್ ಸಾವಿನ ಬೆನ್ನಲ್ಲೇ ಚಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಬಗ್ಗೆ ಚಂದು ಪತ್ನಿ ಶಿಲ್ಪಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಕಳೆದ 5 ವರ್ಷದಿಂದ ಚಂದು ಮತ್ತು ಪವಿತ್ರಾ ಸಹಜೀವನ ನಡೆಸುತ್ತಿದ್ದರು. ತ್ರಿನಯನಿ ಧಾರಾವಾಹಿ ಪ್ರಾಜೆಕ್ಟ್ ಬಂದಾಗಿನಿಂದ ಅವರ ನಡುವೆ ವಿವಾಹೇತರ ಸಂಬಂಧ ಮುಂದುವರೆದಿತ್ತು. ಚಂದು ತನ್ನನ್ನು ಪ್ರೀತಿಸಿ ಮದುವೆಯಾಗಿದ್ದು, ಈಗ ತಮಗೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿಸಿದರು. ಪವಿತ್ರಾರೊಂದಿಗೆ ಇದ್ದಿದ್ದರಿಂದ 5 ವರ್ಷದಿಂದ ಮನೆಗೆ ಬಂದಿರಲಿಲ್ಲ ಎಂದು ಶಿಲ್ಪ ಬಹಿರಂಗಪಡಿಸಿದ್ದಾರೆ.