ಕನ್ನಡ ಚಿತ್ರರಂಗಕ್ಕೆ ಅದ್ಭುತ ಪ್ರೇಮಕಥೆಗಳನ್ನು ಕೊಟ್ಟಂಥ ನಿರ್ದೇಶಕರಲ್ಲಿ ನಟ ಹಾಗೂ ನಿರ್ದೇಶಕ ನಾಗಶೇಖರ್ ಕೂಡ ಒಬ್ಬರು. ನಾಗಶೇಖರ್ ಸಾರಥ್ಯದಲ್ಲಿ ದಶಕದ ಹಿಂದೆ ಮೂಡಿ ಬಂದಿದ್ದ ಸಂಜು ವೆಡ್ಸ್ ಗೀತಾ ಚಿತ್ರ ಕಥೆ ಹಾಡುಗಳಿಂದಲೇ ಜನಪ್ರಿಯವಾಗಿತ್ತು. ಈಗ ಅದೇ ಹೆಸರಿನಲ್ಲಿ ಪಾರ್ಟ್ 2 ಮಾಡುತ್ತಿರುವ ನಿರ್ದೇಶಕ ನಾಗಶೇಖರ್ ಮತ್ತೊಂದು ಪ್ರೇಮಕಥೆ ಹೇಳ ಹೊರಟಿದ್ದಾರೆ. ಶ್ರೀನಗರ ಕಿಟ್ಟಿ ಜೊತೆ ಇಲ್ಲಿ ರಮ್ಯಾ ಬದಲು ರಚಿತಾರಾಮ್ ನಾಯಕಿಯಾಗಿದ್ದಾರೆ. ಸದ್ಯ ಈ ಚಿತ್ರದ 3 ಹಂತಗಳ ಚಿತ್ರೀಕರಣ ಹಾಗೂ ಎಡಿಟಿಂಗ್ ಮುಗಿದಿದ್ದು, ಸಾಧು ಕೋಕಿಲ ಅವರ ಲೂಪ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಕೆಲಸಕ್ಕೆ ಚಾಲನೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ನಾಗಶೇಖರ್, ನಮ್ಮ ಚಿತ್ರ ಅದ್ದೂರಿಯಾಗಿ ಮೂಡಿಬರಲು ನಿರ್ಮಾಪಕರ ಸಹಕಾರವೇ ಕಾರಣ. ಬೆಂಗಳೂರಿನಲ್ಲಿ ಮೊದಲ ಹಂತದ ಶೂಟಿಂಗ್ ಮುಗಿಸಿ, ನಂತರ ಸ್ವಿಟ್ಜರ್ಲ್ಯಾಂಡ್ ನಲ್ಲಿ 15 ದಿನ ಹನ್ನೊಂದು ಲೊಕೇಶನ್ಗಳಲ್ಲಿ ಶೂಟ್ ಮಾಡಿಕೊಂಡು ಬಂದೆವು. ಈಗಾಗಲೇ ಮೂರನೇ ಹಂತ ಮುಗಿಸಿದ್ದು, ಈ ಶುಕ್ರವಾರದಿಂದ ನಾಲ್ಕನೇ ಹಂತದ ಚಿತ್ರೀಕರಣವನ್ನು ಶುರು ಮಾಡುತ್ತಿದ್ದೇವೆ ಎಂದರು.
ಶಿಡ್ಲಘಟ್ಟ ರೇಷ್ಮೆಗೆ ದೊಡ್ಡ ಮಾರ್ಕೆಟ್ ಇದೆ. ನಮ್ಮ ರೇಷ್ಮೆ ನೂಲಿಗೆ ಒಳ್ಳೆ ಬೆಲೆ ಬೇಕು ಅಂತ ಹೋರಾಡುವ ಇಬ್ಬರು ಪ್ರೇಮಿಗಳ ಕಥೆ ಈ ಚಿತ್ರದಲ್ಲಿದೆ. ಆರ್ಟಿಫೀಷಿಯಲ್ ಲವ್ಸ್ಟೋರಿ ಮಾಡೋದಕ್ಕಿಂತ ನಮ್ಮ ಮಣ್ಣಿನ ಹೋರಾಟದ ಕಥೆ ಹೇಳಬೇಕು ಎಂದು ಈ ಸಿನಿಮಾ ಮಾಡಿದ್ದೇನೆ. ನಮ್ಮ ಚಿತ್ರದಲ್ಲಿ ಹಾಡುಗಳೇ ಹೈಲೈಟ್. ಹಾಡು ಕೇಳಿದವರೆಲ್ಲ ಮೆಚ್ಚಿಕೊಂಡಿದ್ದಾರೆ. ಚಿತ್ರ ಶುರುವಾದಾಗಲೇ ಆನಂದ್ ಆಡಿಯೋದವರು ರೈಟ್ಸ್ ತಗೊಂಡಿದ್ದಾರೆ. ಒಂದು ಹಾಡು ಬಳಸಿಕೊಂಡಿರುವ ಬಗ್ಗೆ ಲಹರಿ ಜೊತೆ ಮಾತುಕತೆ ನಡೆಯುತ್ತಿದೆ. ನಮ್ಮ ಸಿನಿಮಾಗೆ ಕಾಂಟ್ರಿವರ್ಸಿ ಪ್ರಚಾರ ಬೇಕಿಲ್ಲ. ಕಿಟ್ಟಿ, ರಚ್ಚು ಪರ್ಫಾರ್ಮನ್ಸ್ ತುಂಬಾ ಚೆನ್ನಾಗಿ ಬಂದಿದೆ. ಜೂನ್ ವೇಳೆಗೆ ಬರಲೇಬೇಕು ಎಂಬ ಹಠದಿಂದ ಕೆಲಸ ಮಾಡುತ್ತಿದ್ದೇವೆ ಮೇ ಎಂಡ್ ಫಸ್ಟ್ ಕಾಪಿ ಬರುತ್ತದೆ ಎಂದು ನಾಗಶೇಖರ್ ಹೇಳಿದರು.