ಕನ್ನಡ ಚಿತ್ರರಂಗದಲ್ಲಿ ಮನರಂಜನೆ ಜೊತೆ ಜೊತೆಗೆ ಕಂಟೆಂಟ್ ಆಧಾರಿತ ಚಿತ್ರಗಳನ್ನು ಸಿನಿಪ್ರೇಮಿಗಳು ಗೆಲ್ಲಿಸಿದ್ದಾರೆ ಅನ್ನೋದಕ್ಕೆ ಭೀಮ, ಕೃಷ್ಣಂ ಪ್ರಣಯ ಸಖಿ, ಪೌಡರ್ ಚಿತ್ರಗಳೇ ಸಾಕ್ಷಿ. ಈ ಸಾಲಿಗೀಗ 'ಲಂಗೋಟಿ ಮ್ಯಾನ್' ಸಿನಿಮಾ ಹೊಸ ಸೇರ್ಪಡೆ. ಯುವ ನಟ ಆಕಾಶ್ ರಾಂಬೋ ಅಭಿನಯದ ಹಾಗೂ ಮಹಿಳಾ ನಿರ್ದೇಶಕಿ ಸಂಜೋತ ಭಂಡಾರಿ ನಿರ್ದೇಶನದ 'ಲಂಗೋಟಿ ಮ್ಯಾನ್' ಚಿತ್ರ ಸೆಕೆಂಡ್ ಹ್ಯಾಂಡ್ ಬಟ್ಟೆಗಳ ಮಾಫಿಯಾ ಕಥೆಯನ್ನು ಒಳಗೊಂಡಿದ್ದು, ಮೊದಲ ದಿನ ಪ್ರೇಕ್ಷಕರಿಂದ ಬಹುತೇಕ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಯೋಗರಾಜ್ ಭಟ್ ಧ್ವನಿಯಲ್ಲಿ ಪಾತ್ರ ಪರಿಚಯ:ವಿಕಟಕವಿ ನಿರ್ದೇಶಕ ಯೋಗರಾಜ್ ಭಟ್ ಧ್ವನಿಯಲ್ಲಿ ಪಾತ್ರಗಳ ಪರಿಚಯದಿಂದ ಆರಂಭವಾಗುವ 'ಲಂಗೋಟಿ ಮ್ಯಾನ್' ಚಿತ್ರ ಮಡಿವಂತಿಕೆಯ ಕುಟುಂಬದಲ್ಲಿ ಲಂಗೋಟಿ ಎಷ್ಟು ಮುಖ್ಯವಾದದ್ದು ಎಂಬುದನ್ನು ತೋರಿಸಲಾಗಿದೆ. ನಿರ್ದೇಶಕಿ ಸಂಜೋತ ಭಂಡಾರಿ ಯಾವುದೇ ಸಮುದಾಯಕ್ಕೆ ಅವಮಾನ ಆಗದಂತೆ ಕಥೆ ಕಟ್ಟಿಕೊಟ್ಟಿದ್ದಾರೆ.
ಹೀಗಿದೆ ಚಿತ್ರದ ಕಥೆ:'ಲಂಗೋಟಿ ಮ್ಯಾನ್' ತಾತ ಮೊಮ್ಮಗನ ಸುತ್ತ ನಡೆಯುವ ಕಥೆ. ಮೊಮ್ಮಗ ಲಂಗೋಟಿ ಹಾಕಿಕೊಳ್ಳಬೇಕೆಂಬುದು ತಾತನ ನಿಯಮ. ಮೊಮ್ಮಗ ಅಂದ್ರೆ ಆಕಾಶ್ ರಾಂಬೋಗೆ ಅಂಡರ್ವೇರ್ ಹಾಕಿಕೊಳ್ಳುವ ಆಸೆ. ತಾತನ ಪಾತ್ರದಲ್ಲಿ ಅಭಿನಯಿಸಿರುವ ಧೀರೇಂದ್ರ ಎಸ್ ಮೊಮ್ಮಗನಿಗೆ ಅಂಡರ್ವೇರ್ ಹಾಕಲು ಬಿಡೋದಿಲ್ಲ. ತಾತನ ಮಾತಿಗೆ ತಲೆ ಕೆಡಿಸಿಕೊಳ್ಳದೇ ಬ್ರ್ಯಾಂಡೆಡ್ ಅಂಡರ್ವೇರ್ ಹಾಕೋದನ್ನು ಮೊಮ್ಮಗ ನಿಲ್ಲಿಸಲ್ಲ. ಹೀಗೆ ಅಂಡರ್ವೇರ್ ಹಾಕಿದಾಗ ಅತ್ಯಾಚಾರ ಹಾಗೂ ಕೊಲೆ ಆರೋಪಕ್ಕೆ ಹೇಗೆ ಗುರಿಯಾಗುತ್ತಾನೆ? ಈ ಸಮಸ್ಯೆಗಳಿಂದ ಹೇಗೆ ಹೊರಗಡೆ ಬರುತ್ತಾನೆ ಅನ್ನೋದು ಈ ಚಿತ್ರದ ಸ್ಟೋರಿ.
ಈ ಹಿಂದೆ ಮಿರ್ಚಿ ಮಂಡಕ್ಕಿ ಖಡಕ್ ಚಾಯ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಸಂಜೋತ ಭಂಡಾರಿ ಅವರು ಫಸ್ಟ್ ಕಾಪಿ ಹೆಸರಲ್ಲಿ ಸದ್ಯ ಸಮಾಜದಲ್ಲಿ ನಡೆಯುತ್ತಿರುವ ಬಟ್ಟೆ ಮಾಫಿಯಾ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಆದರೆ ಸಿನಿಮಾದ ಡ್ಯುರೇಷನ್ ಹಾಗೂ ಆಗಾಗ್ಗೆ ಬರುವ ಸೀನ್ಸ್ ನೋಡಿದ್ರೆ ಕಥೆ ಹೇಳುವ ಶೈಲಿ ಕೊಂಚ ಹಿನ್ನಡೆಯಾದಂತಿದೆ.