'ಪದ್ಮವಿಭೂಷಣ' ಪ್ರಶಸ್ತಿಗೆ ಭಾಜನರಾಗಿರುವ ದಕ್ಷಿಣ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಅವರನ್ನು ಬ್ಲಾಕ್ಬಸ್ಟರ್ ಹಿಟ್ ಸಿನಿಮಾ 'ಅನಿಮಲ್' ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತು ಸೂಪರ್ ಹಿಟ್ 'ದಸರಾ' ನಿರ್ದೇಶಕ ಶ್ರೀಕಾಂತ್ ಒಡೆಲಾ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಚಿರಂಜೀವಿಗೆ ಇತ್ತೀಚೆಗೆ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಫೋಟೋ ಒಂದರಲ್ಲಿ ಸಂದೀಪ್ ಮತ್ತು ಶ್ರೀಕಾಂತ್ ಅವರು ಚಿರಂಜೀವಿ ಅವರೊಂದಿಗೆ ಅವರ ನಿವಾಸದಲ್ಲಿ ಸಂಭಾಷಣೆಯಲ್ಲಿ ತೊಡಗಿರೋದನ್ನು ಕಾಣಬಹುದು.
ಇತ್ತೀಚೆಗಷ್ಟೇ ಪದ್ಮ ಪ್ರಶಸ್ತಿ ವಿಜೇತರ ಹೆಸರು ಘೋಷಣೆಯಾಗಿದೆ. ಸಿನಿಮಾ ಕ್ಷೇತ್ರಕ್ಕೆ ನೀಡಿರುವ ಅಪಾರ ಕೊಡುಗೆ ಮತ್ತು ಸಮಾಜಮುಖಿ ಕೆಲಸಕ್ಕಾಗಿ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆ ನಟನಾಗಿ ಗುರುತಿಸಿಕೊಂಡಿರುವ ಚಿರಂಜೀವಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಈ ವಿಚಾರ ತಿಳಿದ ಬೆನ್ನಲ್ಲೇ ನಟ ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಸಂದೇಶ ಶೇರ್ ಮಾಡುವ ಮುಖೇನ ಸರ್ವರಿಗೂ ಧನ್ಯವಾದ ಅರ್ಪಿಸಿದ್ದರು.
ಅಚಲ ಪ್ರೀತಿ, ಪ್ರೋತ್ಸಾಹಕ್ಕಾಗಿ ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದರು. ನಾಲ್ಕೂವರೆ ದಶಕಗಳ ಸಿನಿ ಪ್ರಯಾಣದಲ್ಲಿ ತಮ್ಮ ಅವಿಭಾಜ್ಯ ಅಂಗದಂತಿರುವ ಪ್ರೇಕ್ಷಕರು, ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬದ ನಿರಂತರ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ವೃತ್ತಿಜೀವನದ ಮೂಲಕ ಚಿರಂಜೀವಿ ಅವರು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಮನರಂಜಿಸಿದ್ದಾರೆ.