ಮೈಸೂರು: ಇಲ್ಲಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್ಮೆಂಟ್ನಲ್ಲಿ ಇಂದು ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ಚೇತನ್ (45), ಇವರ ಪತ್ನಿ ರೂಪಾಲಿ (43), ತಾಯಿ ಪ್ರಿಯಂವಧ (62) ಮತ್ತು ಮಗ ಕುಶಾಲ್ (15) ಮೃತಪಟ್ವವರು. ಈ ಬಗ್ಗೆ ಮೃತ ರೂಪಾಲಿ ತಂದೆ ಸೇತುರಾಮನ್ ದೂರಿನ ಮೇರೆಗೆ ನಗರದ ವಿದ್ಯಾರಣ್ಯಪುರಂನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಫ್ಐಆರ್ನಲ್ಲಿ ಏನಿದೆ? : ಸೇತುರಾಮನ್ ಅವರ ಇಬ್ಬರು ಮಕ್ಕಳ ಪೈಕಿ ಎರಡನೇಯವರಾದ ಎಸ್, ರೂಪಾಲಿ ಅವರನ್ನು ಹಾಸನ ಮೂಲದ ಚೇತನ್ ಅವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿ ಮೈಸೂರಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು. ಚೇತನ್ ಮೆಕಾನಿಕಲ್ ಇಂಜಿಯರ್ ವ್ಯಾಸಂಗ ಮಾಡಿದ್ದು, ಮದುವೆಗೂ ಮುಂಚೆ ಸೌದಿ ಅರೇಬಿಯಾದ ಖಾಸಗಿ ಕಂಪನಿಯೊಂದರಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ಮದುವೆ ಬಳಿಕ ಭಾರತಕ್ಕೆ ವಾಪಸಾಗಿ ಉಡುಪಿಯ ಎಲ್&ಟಿ ಖಾಸಗಿ ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಆಗಿದ್ದರು.
ನಂತರ ಮಧ್ಯಪ್ರದೇಶ, ಹೈದರಾಬಾದ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕೆಲಸ ನಿರ್ವಹಿಸಿ ಪುನಃ ಕುಟುಂಬ ಸಮೇತ ಸೌದಿ ಅರೇಬಿಯಾದ ರಿಯಾದ್ಗೆ ಹೋಗಿ 6 ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಕೋವಿಡ್ ಸಮಯದಲ್ಲಿ ವಾಪಸ್ ಭಾರತಕ್ಕೆ ಬಂದು, ಈ ಹಿಂದೆ ಖರೀದಿ ಮಾಡಿದ್ದ ವಿದ್ಯಾರಣ್ಯಪುರಂನ ವಿಶ್ವೇಶ್ವರ ನಗರದ ಸಂಕಲ್ಪ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು.
ಭಾರತಕ್ಕೆ ವಾಪಸಾದ ಚೇತನ್ ತಮ್ಮ ಹೆಂಡತಿ ರೂಪಾಲಿ ಹೆಸರಿನಲ್ಲಿ ಕಂಪನಿಯೊಂದನ್ನು ಸ್ಥಾಪಿಸಿ, ಮನೆಯಲ್ಲಿಯೇ ಆಫೀಸ್ ಮಾಡಿಕೊಂಡು ಉತ್ತರ ಭಾರತದಿಂದ ಹೊರ ದೇಶಕ್ಕೆ ಕಾರ್ಮಿಕರನ್ನು ಕಳುಹಿಸಿಕೊಡುವ ಕೆಲಸ ಮಾಡುತ್ತಿದ್ದರು.
ಕಳೆದ 6 ತಿಂಗಳ ಹಿಂದೆ ರೂಪಾಲಿ, ಸೇತುರಾಮನ್ ಜೊತೆ ಮಾತನಾಡಿ, ಸ್ವಲ್ಪ ಹಣದ ತೊಂದರೆ ಇರುವ ಬಗ್ಗೆ ಹೇಳಿಕೊಂಡಿದ್ದರು. ಆಗ ಸೇತುರಾಮನ್ ಹಣದ ಸಹಾಯ ಮಾಡುತ್ತೇನೆಂದು ಹೇಳಿದ್ದರು. ಇದಾದ ಬಳಿಕ ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಚೇತನ್ ನಾವು ನಾಲ್ಕು ಜನರು ಇರುವುದಿಲ್ಲ, ಸತ್ತು ಹೋಗುತ್ತೇವೆಂದು ಅಮೆರಿಕದಲ್ಲಿರುವ ತನ್ನ ಸಹೋದರ ಭರತ್ಗೆ ವಾಟ್ಸ್ಆ್ಯಪ್ ಮೂಲಕ ತಿಳಿಸಿದ್ದರು.
ಈ ವಿಚಾರವನ್ನು ಭರತ್, ಸೇತುರಾಮನ್ ಅವರಿಗೆ ತಿಳಿಸಿದಾಗ, ಅವರು ಅಪಾರ್ಟ್ಮೆಂಟ್ ಬಳಿ ಹೋಗಿ ನೋಡಿದಾಗ ಒಳಗಡೆಯಿಂದ ಬಾಗಿಲು ಲಾಕ್ ಆಗಿತ್ತು. ಬಾಗಿಲು ತೆಗೆದು ಒಳಗಡೆ ಹೋಗಿ ನೋಡಿದಾಗ ನಾಲ್ಕು ಜನರು ಸಾವನ್ನಪ್ಪಿರುವುದು ತಿಳಿಯಿತು. ಅಪಾರ್ಟ್ಮೆಂಟ್ನಲ್ಲಿ ಡೆತ್ನೋಟ್ ಮತ್ತು ವಾಯ್ಸ್ ರೆಕಾರ್ಡ್ಗಳು ಸಿಕ್ಕಿವೆ. ನಮಗೆ ಸಾಲದ ಸಮಸ್ಯೆ ಇದ್ದು, ನಾನು ಮೂವರನ್ನು ಕರೆದುಕೊಂಡು ಹೋಗುತ್ತಿದ್ದೇನೆಂದು ಮತ್ತು ನಾನು ಸಾಯುವುದಾಗಿ ಚೇತನ್ ಗೊರೂರು ಫ್ಯಾಮಿಲಿ ಎಂಬ ವಾಟ್ಸ್ಆ್ಯಪ್ ಗ್ರೂಪ್ಗೆ ಕಳುಹಿಸಿದ್ದರು.
ಈ ವಿಚಾರಗಳನ್ನು ಗಮನಿಸಿದಾಗ ಹಣದ ಸಮಸ್ಯೆಯಿಂದ ಚೇತನ್, ಯಾವುದೋ ರೀತಿಯಲ್ಲಿ ಪತ್ನಿ ರೂಪಾಲಿ, ಮಗ ಕುಶಾಲ್ ಹಾಗೂ ತನ್ನ ತಾಯಿ ಪ್ರಿಯಂವಧ ಅವರನ್ನು ಕೊಲೆ ಮಾಡಿ, ತಾನೂ ಕೂಡ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ನೆರೆಮನೆಯವರು ಹೇಳಿದ್ದೇನು? ನಾಲ್ವರ ಸಾವಿನ ಬಗ್ಗೆ ಅಪಾರ್ಟೆಮೆಂಟ್ನ ನೆರೆಮನೆಯವರಾದ ಮೂರ್ತಿ ಪ್ರತಿಕ್ರಿಯಿಸಿ, "ರೂಪಾಲಿ ತಂದೆ ನನಗೆ ಸ್ನೇಹಿತರು. ಅವರು ಒಳ್ಳೆಯ ಜನ. ರೂಪಾಲಿ ಗಂಡ ಚೇತನ್ ಹಾಸನ ಮೂಲದವರು. ರೂಪಾಲಿಗೆ ಚೇತನ್ ಯಾವುದನ್ನು ಹೇಳಿರಲಿಲ್ಲ, ಹೇಳಿದ್ದರೇ ಅವರ ತಂದೆ ಸಹಾಯ ಮಾಡುತ್ತಿದ್ದರು. ಅದನ್ನು ಬಿಟ್ಟು ಹೆಂಡತಿ, ಮಗ, ತಾಯಿಯನ್ನು ಸಾಯಿಸುವ ಅಧಿಕಾರ ಅವರಿಗೆ ಇರಲಿಲ್ಲ" ಎಂದರು.
ಮೃತದೇಹಗಳನ್ನು ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಕುಟುಂಬಸ್ಥರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮೈಸೂರು: ಅಪಾರ್ಟ್ಮೆಂಟ್ನಲ್ಲಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ