ಹಾಸನ : ಹಾಸನ ವಿಶ್ವವಿದ್ಯಾಲಯವನ್ನು ಮುಚ್ಚಬಾರದೆಂದು ಆಗ್ರಹಿಸಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಇಂದು ಪ್ರತಿಭಟನೆ ನಡೆಸಿದರು.
ಹಾಸನ ಹೊರವಲಯದ ಕೆಂಚಟ್ಟಹಳ್ಳಿ ಬಳಿಯಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಧರಣಿ ನಡೆಸಿದರು. ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಉಪನ್ಯಾಸಕರು ಕೂಡ ಪಾಲ್ಗೊಂಡು ಸಾಥ್ ನೀಡಿದರು.

ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಹಾಸನ ವಿಶ್ವವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಬಂದ್ ಮಾಡಬಾರದು ಎಂದು ಒತ್ತಾಯಿಸಿದರು. ವಿಶ್ವವಿದ್ಯಾಲಯ ಬಂದ್ ಮಾಡಿದರೆ ಉಗ್ರ ಹೋರಾಟ ನಡೆಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಹೇಮಗಂಗೋತ್ರಿ ಹೆಸರನಡಿ ಮೊದಲು ಮೈಸೂರು ವಿಶ್ವವಿದ್ಯಾಲಯದ ಅಧೀನದಲ್ಲಿ ನಡೆಯುತ್ತಿದ್ದ ಸ್ನಾತಕೋತ್ತರ ಕಾಲೇಜನ್ನು ಹಿಂದಿನ ಬಿಜೆಪಿ ಸರ್ಕಾರ ಹಾಸನ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸಿತ್ತು. ಹೇಮಗಂಗೋತ್ರಿಯಾಗಿ ಸ್ನಾತಕೋತ್ತರ ಪದವಿ ನೀಡುತ್ತಿದ್ದು, 2 ವರ್ಷದಿಂದ ಹಾಸನ ವಿಶ್ವವಿಶ್ವವಿದ್ಯಾಲಯದ ಅಡಿಯಲ್ಲಿ ವಿದ್ಯಾರ್ಥಿಗಳು ಸೇರ್ಪಡೆಗೊಂಡು ವಿದ್ಯಾಭ್ಯಾಸ ಮಾಡುತ್ತಿದ್ದರು. ಅಲ್ಲದೇ, ಈ ಬಾರಿ ಕಳೆದ 2-3 ವರ್ಷಕ್ಕಿಂತ ಹೆಚ್ಚು ದಾಖಲಾತಿ ಕಂಡಿದ್ದು, ಫಲಿತಾಂಶದಲ್ಲಿಯೂ ಉತ್ತಮವಾಗಿದೆ ಎಂದು ಪ್ರತಿಭಟನಾನಿರತ ಉಪನ್ಯಾಸಕರು ತಿಳಿಸಿದರು.

ಇಂತಹ ವೇಳೆ ಮತ್ತೆ ರಾಜ್ಯ ಸರ್ಕಾರ ಹಾಸನ ವಿಶ್ವವಿದ್ಯಾಲಯವನ್ನು ಮುಚ್ಚುವ ನಿರ್ಧಾರಕ್ಕೆ ಬಂದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಸರ್ಕಾರ ಹಾಸನ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಯಥಾಪ್ರಕಾರ ವಿವಿಯನ್ನು ಮುಂದುವರೆಸಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಿಂದ ವಿಶ್ವವಿದ್ಯಾಲಯ ಮುಚ್ಚುವ ಭಾಗ್ಯ: ಪ್ರತಿಪಕ್ಷ ನಾಯಕ ಆರ್.ಅಶೋಕ್