ಹಿಂದಿ ಚಿತ್ರರಂಗದ ಪವರ್ಫುಲ್ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಅವರು ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಲೆಜೆಂಡ್ ಎಸ್ಎಸ್ ರಾಜಮೌಳಿ ಅವರ ಸಿನಿಮಾಗಳ ಕುರಿತು ಹೇಳಿಕೆಗಳನ್ನು ನೀಡಿದ್ದಾರೆ. ನಿರ್ದೇಶಕರು ತಮ್ಮ ಕಥೆಯನ್ನು ನಂಬಿದ್ರೆ, ಸಿನಿಮಾ ಬ್ಲಾಕ್‌ಬಸ್ಟರ್ ಆಗುತ್ತದೆ ಎಂಬುದನ್ನು ಒತ್ತಿ ಹೇಳಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಅವರು ಚಿತ್ರವೊಂದರ ಯಶಸ್ಸಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ನಂಬಿಕೆ ಪ್ರಮುಖವಾದದ್ದು ಎಂಬುದನ್ನಿಲ್ಲಿ ತಿಳಿಸಿದರು. ಈ ಸಂದರ್ಭ, ರಾಜಮೌಳಿ, ಸಂದೀಪ್ ರೆಡ್ಡಿ ವಂಗಾ ಮತ್ತು ಅನಿಲ್ ಶರ್ಮಾ ಅವರ ಸಿನಿಮಾಗಳನ್ನು ಉಲ್ಲೇಖಿಸಲಾಯಿತು.
ಕೆಲ ಚಲನಚಿತ್ರಗಳು ತರ್ಕಕ್ಕಿಂತ (ಲಾಜಿಕ್) ಹೆಚ್ಚಾಗಿ ನಂಬಿಕೆಯ ಆಧಾರದ ಮೇಲೆ ಯಶಸ್ವಿ ಆಗುತ್ತವೆ. ಪ್ರಸಿದ್ಧ ನಿರ್ದೇಶಕರ ಸಿನಿಮಾಗಳಲ್ಲಿ ಇದು ಕಂಡುಬರುತ್ತದೆ. ಸಿನಿಮಾಗಳಲ್ಲಿ ನಂಬಿಕೆ ಇರುವವರೆಗೂ ಪ್ರೇಕ್ಷಕರು ತರ್ಕವನ್ನು ಲೆಕ್ಕಿಸುವುದಿಲ್ಲ ಎಂಬುದನ್ನು ಆಯಾ ನಿರ್ದೇಶಕರು ಸಾಬೀತು ಪಡಿಸಿದ್ದಾರೆ. ಉದಾಹರಣೆಗೆ, ರಾಜಮೌಳಿ ಅವರ ಸಿನಿಮಾಗಳನ್ನು ನೋಡಿದ್ರೆ, ಪ್ರೇಕ್ಷಕರು ಅವರ ಚಿತ್ರಗಳಲ್ಲಿನ ಲಾಜಿಕ್ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ನಿರ್ದೇಶಕರಿಗೆ ತಮ್ಮ ಕಥೆಯಲ್ಲಿ ಸಂಪೂರ್ಣ ವಿಶ್ವಾಸವಿರುತ್ತದೆ. ಯಾವುದೇ ದೃಶ್ಯವನ್ನು ಪ್ರೇಕ್ಷಕರು ನಂಬುವಂತೆ ಪರದೆ ಮೇಲೆ ತೋರಿಸಬಹುದು. 'ಆರ್‌ಆರ್‌ಆರ್', 'ಅನಿಮಲ್', 'ಗದರ್'ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳಿಗೂ ಇದು ಅನ್ವಯಿಸುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಛಾವಾ: ಮೂರೇ ದಿನದಲ್ಲಿ ₹100 ಕೋಟಿಗೂ ಅಧಿಕ ಕಲೆಕ್ಷನ್; ಯಶಸ್ಸಿನ ಹಾದಿಯಲ್ಲಿ ರಶ್ಮಿಕಾ ಮಂದಣ್ಣ
ಈ ಚಿತ್ರಗಳು ಹಿಟ್ ಆಗಲು ಪ್ರಮುಖ ಕಾರಣವೆಂದ್ರೆ ಆಯಾ ನಿರ್ದೇಶಕರ ಮೇಲಿನ ನಂಬಿಕೆ. ಒಬ್ಬ ವ್ಯಕ್ತಿ 1,000 ಜನರನ್ನು ಹೊಡೆಯುವುದನ್ನು ತೋರಿಸಿದರೂ, ಅದು ಸಾಧ್ಯವೇ ಅಥವಾ ಇಲ್ಲವೇ ಎಂದು ಯಾರೂ ಹೆಚ್ಚು ಯೋಚಿಸುವುದಿಲ್ಲ. ನಿರ್ದೇಶಕ ಅನಿಲ್ ಶರ್ಮಾ ಅವರು ಸನ್ನಿ ಡಿಯೋಲ್ ಹಾಗೂ ಕಥೆ ಮೇಲೆ ನಂಬಿಕೆ ಇಟ್ಟಿದ್ದರು. ಅದನ್ನೇ ಸ್ಕ್ರೀನ್ ಮೇಲೆ ತೋರಿಸಲಾಯಿತು. ಪ್ರೇಕ್ಷಕರು ಕೂಡ ಇದನ್ನು ನಂಬಿದ್ರು. ಪರಿಣಾಮವಾಗಿ, 'ಗದರ್ 2' ಬ್ಲಾಕ್‌ಬಸ್ಟರ್ ಹಿಟ್ ಆಯ್ತು. ಒಂದು ಚಿತ್ರದ ಯಶಸ್ಸು ಸಂಪೂರ್ಣವಾಗಿ 'ನಂಬಿಕೆ' ಮೇಲೆ ಅವಲಂಬಿತವಾಗಿದೆ. ಲಾಜಿಕ್ ಬಗ್ಗೆ ಯೋಚಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಸಿನಿಮಾವನ್ನು ಕೇವಲ ಮನರಂಜನೆಗಾಗಿ ನೋಡಬೇಕು ಎಂದು ಕರಣ್ ತಿಳಿಸಿದ್ರು.
ಇದನ್ನೂ ಓದಿ: ಧನ್ಯತಾ ಕೈ ಹಿಡಿದು ಧನ್ಯರಾದ ಡಾಲಿ ಧನಂಜಯ್: ಸಂಭ್ರಮದ ಫೋಟೋಗಳಿಲ್ಲಿವೆ
ಕರಣ್ ಜೋಹರ್ 1998ರಲ್ಲಿ 'ಕುಚ್ ಕುಚ್ ಹೋತಾ ಹೈ' ಚಿತ್ರದ ಮೂಲಕ ನಿರ್ದೇಶಕರಾಗಿ ಬಾಲಿವುಡ್ ಪ್ರವೇಶಿಸಿದರು. ಅಂದಿನಿಂದ, ಅವರು ಸರಣಿ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತಾ ಬಂದಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಅಡಿ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ನಿರ್ದೇಶಕ, ನಿರ್ಮಾಪಕ ಮತ್ತು ಬರಹಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ 5 ಚಿತ್ರಗಳನ್ನು ನಿರ್ಮಿಸಿದ್ದ ಕರಣ್, ಪ್ರಸ್ತುತ 'ಧಡಕ್-2' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ, ಆರ್‌ಆರ್‌ಆರ್ ಮೂಲಕ ಆಸ್ಕರ್ವರೆಗೆ ಜನಪ್ರಿಯತೆ ಸಂಪಾದಿಸಿದ ರಾಜಮೌಳಿ ಅವರು ಮಹೇಶ್ ಬಾಬು ಮುಖ್ಯಭೂಮಿಕೆಯ ಸಿನಿಮಾದಲ್ಲಿ ನಿರತರಾಗಿದ್ದಾರೆ.