ಬೆಂಗಳೂರು: ಗೃಹಿಣಿಯೊಬ್ಬರು ತನ್ನ ಮಗುವನ್ನು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಬಾಗಲಗುಂಟೆ ಠಾಣಾ ವ್ಯಾಪ್ತಿಯ ರಾಮಯ್ಯ ಲೇಔಟ್‌ನಲ್ಲಿರುವ ಮನೆಯೊಂದರಲ್ಲಿ ಭಾನುವಾರ ಸಂಜೆ ನಡೆದಿದೆ. ಐದು ವರ್ಷದ ಮಗಳು ರೋಶಿಣಿಯನ್ನು ಕೊಂದು, ಬಳಿಕ ತಾಯಿ ಶೃತಿ (33) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಾವಗಡದ ಬಳಿಯ ಗ್ರಾಮವೊಂದರಲ್ಲಿ ಪಂಚಾಯತ್ ಅಧ್ಯಕ್ಷೆಯಾಗಿದ್ದ ಶೃತಿ, ಈ ಹಿಂದೆ ಪಂಚಾಯತ್ ಕಚೇರಿಯಲ್ಲಿ ಆಡಿಟಿಂಗ್ ಕೆಲಸ ಮಾಡುತ್ತಿದ್ದ ಗೋಪಾಲಕೃಷ್ಣ ಅವರನ್ನು ಪ್ರೀತಿಸಿ 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಭಾನುವಾರ ಸಂಜೆ ಪತಿ ಮನೆಯಿಂದ ಹೊರಗಡೆ ಹೋಗಿದ್ದರು. ಅದೇ ಸಂದರ್ಭದಲ್ಲಿ ಪತಿ ವಿರುದ್ಧ ಅಕ್ರಮ ಸಂಬಂಧ ಹೊಂದಿರುವುದಾಗಿ ಆರೋಪಿಸಿ ಡೆತ್ನೋಟ್ ಬರೆದಿಟ್ಟು, ಮಗುವನ್ನೂ ಕೊಲೆ ಮಾಡಿ ಶೃತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮನೆಯ ಹೊರಗಡೆ ಆಟವಾಡುತ್ತಿದ್ದ ಹಿರಿಯ ಮಗ ಮನೆಯೊಳಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆಯ ಕುರಿತು ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಗೋಪಾಲಕೃಷ್ಣ ಅವರನ್ನು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಆಟವಾಡುವಾಗ ಅಸಲಿ ಗನ್‌ನಿಂದಲೇ ಶೂಟ್ ಮಾಡಿದ 13ರ ಬಾಲಕ; ಮಂಡ್ಯದಲ್ಲಿ ಭಾರೀ ಅನಾಹುತ