ರಮ್ಯಾ, ಒಂದು ಸಮಯದಲ್ಲಿ ಕನ್ನಡ ಚಿತ್ರರಂಗದ ನಂಬರ್ ಒನ್ ನಟಿಯಾಗಿ ಎಲ್ಲರ ಗಮನ ಸೆಳೆದಿದ್ದರು. ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಆದ ಸ್ಟಾರ್ಡಮ್ ಹೊಂದಿದ್ದರು. ಕನ್ನಡ ಚಿತ್ರರಂಗದ ಕೆಲವೇ ಬಹುಬೇಡಿಕೆ ನಟಿಯರಲ್ಲಿ ಇವರೂ ಕೂಡಾ ಒಬ್ಬರಾಗಿದ್ದರು. ಸದ್ಯ ಸಿನಿಮಾಗಳಿಂದ ದೂರವುಳಿದಿದ್ದರೂ ಕೂಡಾ ಜನಪ್ರಿಯತೆಗೇನು ಕಡಿಮೆ ಇಲ್ಲ. ಸದಾ ಒಂದಿಲ್ಲೊಂದು ವಿಚಾರಗಳ ಮೂಲಕ ಸದ್ದು ಮಾಡುವ ಮೋಹಕತಾರೆಯ ಮದುವೆ ವಿಚಾರ ಇತ್ತೀಚೆಗಷ್ಟೇ ಸಖತ್ ಸದ್ದು ಮಾಡಿತ್ತು.
ಹೌದು, ಎರಡ್ಮೂರು ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ನಟಿ ರಮ್ಯಾ ಅವರು ಶೀಘ್ರದಲ್ಲೇ ಮದುವೆ ಆಗುತ್ತಿದ್ದಾರೆ ಎಂಬ ವದಂತಿ ಜೋರಾಗೇ ಹರಡಿತ್ತು. ಈ ಬಗ್ಗೆ ನಟಿಯಾಗಲಿ ಅಥವಾ ಅವರ ತಂಡವಾಗಲಿ ಯಾವುದೇ ಅಧಿಕೃತ ಮಾಹಿತಿ ಕೊಡದಿದ್ದರೂ ಕೂಡಾ ನಿಶ್ಚಿತಾರ್ಥ ಮತ್ತು ಮದುವೆಗೆ ಸಂಬಂಧಿಸಿದಂತೆ ತರತರವಾದ ಊಹಾಪೋಹಳು ಹರಿದಾಡಿದ್ದವು. ಮದುವೆ ವದಂತಿ ಬಗ್ಗೆ ಅಸಮಾಧಾನಗೊಂಡಿರುವ ನಟಿ ರಮ್ಯಾ ಅವರೀಗ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.
ರಮ್ಯಾ ಪ್ರತಿಕ್ರಿಯೆ:ವದಂತಿ ಉಲ್ಬಣಗೊಂಡ ಬೆನ್ನಲ್ಲೇ, ಮೌನ ಮುರಿಯಲು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ವೇದಿಕೆಯನ್ನು ಬಳಸಿಕೊಂಡಿದ್ದಾರೆ. ಸ್ಟೋರಿ ಶೇರ್ ಮಾಡಿರುವ ನಟಿ, ''ಲೆಕ್ಕವಿಲ್ಲದಷ್ಟು ಬಾರಿ ಕೆಲ ಮಾಧ್ಯಮದವರು ನನ್ನ ಮದುವೆ ಮಾಡಿಸಿಬಿಟ್ಟಿದ್ದಾರೆ. ಒಂದು ವೇಳೆ ನಾನು ಯಾವಾಗಲಾದರು ಮದುವೆಯಾಗುವುದಾದರೆ ವಿಚಾರವನ್ನು ನಾನೇ ತಿಳಿಸುತ್ತೇನೆ. ಅಲ್ಲಿವರೆಗೆ ಅನಧಿಕೃತ ಮೂಲಗಳ ವದಂತಿಗೆ ಕಿವಿಗೊಡಬೇಡಿ ಎಂದು'' ಮನವಿ ಮಾಡಿಕೊಂಡಿದ್ದಾರೆ.
41ರ ಹರೆಯದ ನಟಿ ರಮ್ಯಾ ಸದ್ಯ ಸಿಂಗಲ್ ಲೈಫ್ ಅನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮೋಹಕತಾರೆ ರಮ್ಯಾ ಮದುವೆ ಯಾವಾಗ? ಎಂಬ ಪ್ರಶ್ನೆ ದೀರ್ಘ ಸಮಯದಿಂದ ಇದೆ. ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವರ ಫ್ಯಾನ್ಸ್ ಈ ಪ್ರಶ್ನೆಯನ್ನು ಎತ್ತುತ್ತಲೇ ಇರುತ್ತಾರೆ. ಇತ್ತೀಚೆಗೆ ಮತ್ತೆ ಮದುವೆ ಮಾತು ಶುರುವಾಗಿತ್ತು.