ತಿರುವನಂತಪುರಂ(ಕೇರಳ): ಮಲಯಾಳಂ ನಟಿ ಹನಿ ರೋಸ್ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಉದ್ಯಮಿ ಬಾಬಿ ಚೆಮ್ಮನೂರ್ ಅವರನ್ನು ಬುಧವಾರ ಬಂಧಿಸಿದೆ.
ಚೆಮ್ಮನೂರ್ ಅವರನ್ನು ವಯನಾಡ್‌ನಲ್ಲಿ ಬಂಧಿಸಲಾಗಿದೆ ಎಂದು ಕೊಚ್ಚಿ ನಗರ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಚೆಮ್ಮನೂರು ನನ್ನ ವಿರುದ್ಧ ಪದೇ ಪದೇ ಅಶ್ಲೀಲ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹನಿ ರೋಸ್ ಕೊಚ್ಚಿ ಸೆಂಟ್ರಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದರು.
ಬಾಬಿ ಚೆಮ್ಮನೂರು ಬಂಧನದ ಕುರಿತು ಈಟಿವಿ ಭಾರತ್‌ಗೆ ಪ್ರತಿಕ್ರಿಯಿಸಿದ ನಟಿ, "ಇದು ನನಗೆ ನೆಮ್ಮದಿಯ ದಿನ. ಈ ವಿಷಯವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೂ ಪ್ರಸ್ತಾಪಿಸಿದ್ದೇನೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ" ಎಂದು ಹೇಳಿದರು.
ಮಲಯಾಳಂ ಚಿತ್ರರಂಗದ ಪ್ರಮುಖ ನಟಿ: ಹನಿ ರೋಸ್ ವರ್ಗೀಸ್ ಅವರು ಮಲಯಾಳಂ ಚಲನಚಿತ್ರೋದ್ಯಮದ ಪ್ರಮುಖ ನಟಿ. ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಇತ್ತೀಚೆಗೆ, 2023ರ ಆ್ಯಕ್ಷನ್-ಡ್ರಾಮಾ 'ವೀರ ಸಿಂಹ ರೆಡ್ಡಿ'ಯಲ್ಲಿ ನಂದಮೂರಿ ಬಾಲಕೃಷ್ಣ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು.
ಭಾನುವಾರ, ಹನಿ ರೋಸ್ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಒಬ್ಬ ವ್ಯಕ್ತಿ ಮಾಧ್ಯಮ ವೇದಿಕೆಗಳಲ್ಲಿ ನನ್ನನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ತಿಳಿಸಿದ್ದರು. ಆ ವ್ಯಕ್ತಿಯ ಗುರುತು ಬಹಿರಂಗಪಡಿಸಿರಲಿಲ್ಲ. ಆದರೆ, ಅವರ ಪೋಸ್ಟ್‌ಗೆ ಅನೇಕ ಜನರು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದಾಗ ವಿವಾದ ಹೆಚ್ಚಾಗತೊಡಗಿದೆ. ಬಳಿಕ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಕೊಚ್ಚಿ ಸೆಂಟ್ರಲ್ ಪೊಲೀಸರು 30 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದರು.
ಮಂಗಳವಾರ ಹನಿ ರೋಸ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬಾಬಿ ಚೆಮ್ಮನೂರು ಅವರನ್ನು ಹೆಸರಿಸಿ, "ನೀವು (ಚೆಮ್ಮನೂರು) ಮಾಡಿದ ಅವಹೇಳನಕಾರಿ ಹೇಳಿಕೆಗಳ ವಿರುದ್ಧ ನಾನು ಎರ್ನಾಕುಲಂ ಕೇಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನಿಮ್ಮಂತಹ ಆಲೋಚನೆವುಳ್ಳ ಅಂತಹ ಜನರ ವಿರುದ್ಧವೂ ನಾನು ಕ್ರಮ ಕೈಗೊಳ್ಳುತ್ತೇನೆ. ನಿಮಗೆ ನಿಮ್ಮ ಹಣದ ಮೇಲೆ ನಂಬಿಕೆ ಇರಬಹುದು. ಆದರೆ ನನಗೆ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದೆ" ಎಂದು ಹೇಳಿದ್ದರು.
"ನನ್ನ ದೂರು ಸರಿಯಾಗಿದೆ ಎಂದು ಪೊಲೀಸರಿಗೆ ಮನವರಿಕೆಯಾಯಿತು. ನಾನು ಎದುರಿಸಿದ ದೌರ್ಜನ್ಯದ ಬಗ್ಗೆ ಮಾತ್ರವಲ್ಲದೇ ಇಲ್ಲಿನ ನನ್ನ ಸಹೋದ್ಯೋಗಿಗಳೂ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ತಿಳಿಸಿದ್ದೇನೆ. ಎಲ್ಲಾ ಹಂತಗಳಲ್ಲೂ ಮಹಿಳೆಯರು ಇದೇ ರೀತಿಯ ದೌರ್ಜನ್ಯ ಮತ್ತು ಶೋಷಣೆಗೆ ಒಳಗಾಗುತ್ತಿದ್ದಾರೆ. ಇದನ್ನು ನಾನೂ ಎದುರಿಸಿದ್ದೇನೆ. ನಾನು ಅವರೆಲ್ಲರ ಪರವಾಗಿ ಮುಂದೆ ಬಂದಿದ್ದೇನೆ" ಎಂದು ಹನಿ ರೋಸ್ ಹೇಳಿದ್ದಾರೆ.
ಅಷ್ಟೇ ಅಲ್ಲದೇ, ಬಾಬಿ ಚೆಮ್ಮನೂರು ಸಾಮಾಜಿಕ ಮಾಧ್ಯಮಗಳ ಮೂಲಕ ತನ್ನನ್ನೂ ಒಳಗೊಂಡಂತೆ ಅನೇಕ ಮಹಿಳೆಯರಿಗೆ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ದೂರಿದ್ದಾರೆ.
ಚಲನಚಿತ್ರ ಸಂಸ್ಥೆ ಫೆಫ್ಕಾ ಕೂಡ ಹನಿ ರೋಸ್‌ಗೆ ಬೆಂಬಲ ಸೂಚಿಸಿದೆ. ಹನಿ ರೋಸ್ ಕೆಚ್ಚೆದೆಯ ಹೋರಾಟ ಪ್ರಾರಂಭಿಸಿದ್ದಾರೆ ಎಂದು FEFKA ಹೇಳಿದೆ. ನಟಿಯ ಹೋರಾಟ ಲೈಂಗಿಕ ದೌರ್ಜನ್ಯದ ವಿರುದ್ಧ ಸಾಮೂಹಿಕ ಪ್ರತಿರೋಧದ ಆರಂಭ ಎಂದು ಫೇಸ್‌ಬುಕ್‌ನಲ್ಲಿ ಬರೆದಿದೆ.
ಆರೋಪಗಳನ್ನು ಅಲ್ಲಗಳೆದ ಬಾಬಿ ಚೆಮ್ಮನೂರು: ಚೆಮ್ಮನೂರು ಆಭರಣ ಬ್ರ್ಯಾಂಡ್‌ನ ಮಾಲೀಕ ಮತ್ತು ಲೈಫ್ ವಿಷನ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಬಾಬಿ ಚೆಮ್ಮನೂರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. "ಅವರು ನನ್ನ ಎರಡು ಉದ್ಘಾಟನಾ ಸಮಾರಂಭಗಳಲ್ಲಿ ಭಾಗವಹಿಸಿದ್ದರು. ನಾವು ಅಲ್ಲಿ ಡ್ಯಾನ್ಸ್ ಮಾಡಿದೆವು ಮತ್ತು ತಮಾಷೆಯ ವಿಷಯಗಳನ್ನು ಮಾತನಾಡಿದೆವು. ಆ ಸಮಯದಲ್ಲಿ ಅವರು ಯಾವುದಕ್ಕೂ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಮತ್ತು ಈಗ ತಿಂಗಳುಗಳ ನಂತರ, ಅವರು ದೂರು ದಾಖಲಿಸಿದ್ದಾರೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಮಲಯಾಳಂ ಸಿನಿಮಾ ನಿರ್ದೇಶಕನ ವಿರುದ್ಧದ ತನಿಖೆಗೆ ತಡೆ - RANJITH SEXUAL ASSAULT CASE