ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮುಖ್ಯಭೂಮಿಕೆಯ ಮುಂದಿನ ಚಿತ್ರ ಘೋಷಣೆಯಾಗಿದೆ. ಸ್ಪೈ-ಯೂನಿವರ್ಸ್ ಥ್ರಿಲ್ಲರ್ 'ಟೈಗರ್ 3'ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿರುವ ಸಲ್ಲು, ಸೂಪರ್ ಹಿಟ್ 'ಗಜಿನಿ' ಸಿನಿಮಾ ಖ್ಯಾತಿಯ ಎ.ಆರ್ ಮುರುಗಾದಾಸ್ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶೀರ್ಷಿಕೆಯಿಡದ ಈ ಚಿತ್ರದ ಬಿಡುಗಡೆ ದಿನಾಂಕವನ್ನೂ ಬಹಿರಂಗಪಡಿಸಲಾಗಿದೆ. ಹೌದು ಸಲ್ಮಾನ್ ನಟನೆಯ ಮುಂದಿನ ಚಿತ್ರ 2025ರ ಈದ್ ದಿನದಂದು ಬಿಡುಗಡೆಯಾಗಲಿದೆ. ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಸ್ಟಾರ್ ಹೀರೋ ಸಲ್ಮಾನ್ ಖಾನ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. "ಅಸಾಧಾರಣ ಪ್ರತಿಭಾನ್ವಿತ ನಿರ್ದೇಶಕ ಎ.ಆರ್ ಮುರುಗಾದಾಸ್ ಮತ್ತು ನನ್ನ ಸ್ನೇಹಿತ ಸಾಜಿದ್ ನಾಡಿಯಾಡ್ವಾಲ ಜೊತೆ ಸಿನಿಮಾ ಮಾಡಲು ಸಂತೋಷವಾಗಿದೆ. ಈ ಕಾಂಬಿನೇಶನ್ ಬಹಳ ವಿಶೇಷವಾಗಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದದೊಂದಿಗೆ ನಾನು ಈ ಪ್ರಯಾಣಕ್ಕೆ ಎದುರು ನೋಡುತ್ತಿದ್ದೇನೆ. 2025ರ ಈದ್ಗೆ ಸಿನಿಮಾ ಬಿಡುಗಡೆ ಆಗಲಿದೆ'' ಎಂದು ಬರೆದುಕೊಂಡಿದ್ದಾರೆ.
ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲ ಅವರ ಬ್ಯಾನರ್ 'ನಾಡಿಯಾಡ್ವಾಲ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್' ಈ ಹೆಸರಿಸದ ಬಿಗ್ ಪ್ರೊಜೆಕ್ಟ್ಗೆ ಬಂಡವಾಳ ಹೂಡಲಿದೆ. ತಮಾಶಾ, ಜುಡ್ವಾ, ಮುಜ್ಸೆ ಶಾದಿ ಕರೋಗಿ, ಕಿಕ್ ಸೇರಿದಂತೆ ಅನೇಕ ಚಿತ್ರಗಳಿಗೆ ಹೆಸರುವಾಸಿಯಾಗಿರೋ ನಿರ್ಮಾಪಕರು ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲಿದ್ದಾರೆ. ಸಲ್ಮಾನ್ ಮತ್ತು ಸಾಜಿದ್ ಜೋಡಿ ಜೀತ್, ಜುಡ್ವಾ, ಹರ್ ದಿಲ್ ಜೋ ಪ್ಯಾರ್ ಕರೇಗಾ, ಮುಜ್ಸೆ ಶಾದಿ ಕರೋಗಿ, ಕಿಕ್ ಸೇರಿದಂತೆ ಹಲವು ಚಿತ್ರಗಳಲ್ಲಿ ಈಗಾಗಲೇ ಒಟ್ಟಿಗೆ ಕೆಲಸ ಮಾಡಿದೆ. ಕೊನೆಯದಾಗಿ ಈ ಸಲ್ಲು-ಸಾಜಿದ್ ಕಾಂಬೋದಲ್ಲಿ ಕಿಕ್ (2024) ಸಿನಿಮಾ ಮೂಡಿ ಬಂದಿತ್ತು. 'ಕಿಕ್', ನಿರ್ಮಾಪಕನಾಗಿ ಮಾತ್ರವಲ್ಲದೇ ಸಾಜಿದ್ ನಿರ್ದೇಶನದ ಚೊಚ್ಚಲ ಚಿತ್ರವೂ ಆಗಿತ್ತು.