ಮುಲುಗು: ತೆಲಂಗಾಣದ ಮುಲುಗು ಜಿಲ್ಲೆಯ ಏಟೂರು ನಾಗಾರಂ ಚಲಪಾಕ್ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ ಮತ್ತು ನಕ್ಸಲರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಏಳು ಜನ ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತೆಲಂಗಾಣ ಗ್ರೆಹೌಂಡ್ಸ್ ಮತ್ತು ನಕ್ಸಲ್ ನಿಗ್ರಹ ಪಡೆಯ ಜಂಟಿ ಕಾರ್ಯಾಚರಣೆ ನಡೆಸಿ, 7 ಜನ ನಕ್ಸಲರನ್ನು ಎನ್ಕೌಂಟರ್ ಮಾಡಿದೆ. ಹತ ನಕ್ಸಲರನ್ನು ಇಲ್ಲಂದು ನರ್ಸಂಪೇಟ್ ಏರಿಯಾದ ಕಮಿಟಿ ಕಾರ್ಯದರ್ಶಿ ಬದ್ರು ಅಲಿಯಾಸ್ ಪಾಪಣ್ಣ (35), ಮಧು(43), ಕರುಣಾಕರ್ (22), ಜೈಸಿಂಗ್ (25), ಕಿಶೋರ್ (22) ಮತ್ತು ಕಾಮೇಶ್ (23) ಹಾಗೂ ಜಮುನ (23) ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ನಕ್ಸಲರ ಚಲನವಲನದ ಮಾಹಿತಿ ಆಧರಿಸಿ ನಕ್ಸಲ್ ನಿಗ್ರಹ ಪಡೆ ಮತ್ತು ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.
ಗುಂಡಿನ ಚಕಮಕಿಯಲ್ಲಿ 7 ಜನ ನಕ್ಸಲರು ಹತರಾಗಿದ್ದಾರೆ. ಸ್ಥಳದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿದಿದ್ದು, ಎಕೆ 47 ಸೇರಿದಂತೆ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮಾಹಿತಿ ಆಧರಿಸಿ ಪೊಲೀಸರು ಗಡಿ ಭಾಗಕ್ಕೆ ತೆರಳಿ ಕಾರ್ಯಾಚರಣೆಗಿಳಿದಾಗ ನಕ್ಸಲರು ಗುಂಡಿನ ದಾಳಿ ಮಾಡಲು ಆರಂಭಿಸಿದ್ದರು. ಆಗ ಪೊಲೀಸರು ಪ್ರತಿ ದಾಳಿ ಮಾಡಿದ್ದು, 7 ನಕ್ಸಲರು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 22 ರಂದು ಇದೇ ಜಿಲ್ಲೆಯಲ್ಲಿ ಪಂಚಾಯತ್ ಕಾರ್ಯದರ್ಶಿ ಸೇರಿದಂತೆ ಇಬ್ಬರನ್ನು ನಕ್ಸಲರು ಕೊಂದಿದ್ದರು. ತೆಲಂಗಾಣ - ಛತ್ತೀಸಘಡ್ ಗಡಿಯಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು ನವೆಂಬರ್ 11 ರಂದು ತೆಲಂಗಾಣ ಡಿಜಿಪಿ ಜಿತೇಂದ್ರ ಅವರು ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಛತ್ತೀಸಘಡ್ ಪೊಲೀಸರ ಸಹಭಾಗಿತ್ವದಲ್ಲಿ ತೆಲಂಗಾಣ ಗಡಿಯಲ್ಲಿ ನಕ್ಸಲರ ಚಟುವಟಿಕೆಗಳನ್ನು ಪತ್ತೆ ಹಚ್ಚಿ, ನಿಯಂತ್ರಿಸಲು ಡಿಜಿಪಿ ಈ ವೇಳೆ ಕರೆ ನೀಡಿದ್ದರು.
ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ನಿಷೇಧಿತ ನಕ್ಸಲ್ ನಾಯಕರು ಕೆಲವೆಡೆ ಅಭಿವೃದ್ಧಿ ಕೆಲಸಗಳನ್ನ ನಿಲ್ಲಿಸಲು ಸಮಾಜ ವಿರೋಧಿ ಚಟುವಟಿಕೆಗಳನ್ನು ನಡೆಸುವ ಉದ್ದೇಶ ಹೊಂದಿದ್ದಾರೆ ಎಂದು ಡಿಜಿಪಿ ತಿಳಿಸಿದ್ದರು.
ನವೆಂಬರ್ 19 ರಂದು ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ವಿನಾಲೆಯ ಪೀತಬೈಲುವಿನಲ್ಲಿ ನಕ್ಸಲ್ ನಿಗ್ರಹ ಪಡೆಯ ಎನ್ಕೌಂಟರ್ನಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಹತರಾಗಿದ್ದರು. ಕಳೆದ 20 ವರ್ಷಗಳಿಂದ ವಿಕ್ರಂ ಗೌಡ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಉಡುಪಿ: ಎನ್ಕೌಂಟರ್ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಹತ