ಬೆಂಗಳೂರು: ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ದ ಸದಸ್ಯರಾಗಿರುವ ತಮ್ಮನ್ನು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿಟಿಡಿಎ)ದ ಸಭೆಯಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಿದ್ದ ಜಲ ಸಂಪನ್ಮೂಲ ಇಲಾಖೆ ಕ್ರಮ ಪ್ರಶ್ನಿಸಿ ವಿಧಾನಪರಿಷತ್ ಸದಸ್ಯ ಪಿ.ಹೆಚ್.ಪೂಜಾರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ಪ್ರಸಾದ್ ಅವರಿದ್ದ ಏಕಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಅಲ್ಲದೇ, ರಾಜ್ಯ ಸರ್ಕಾರ, ಜಲಸಂಪನ್ಮೂಲ ಇಲಾಖೆ, ನಗರಾಭಿವೃದ್ಧಿ ಇಲಾಖೆಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಮುಂದೂಡಿತು.
ವಿಜಯಪುರ-ಬಾಗಲಕೋಟೆ ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಪಿ.ಹೆಚ್. ಪೂಜಾರ ಅವರು 2022ರಲ್ಲಿ ಬಿಜೆಪಿ ಪಕ್ಷದಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದಾರೆ. ಬಾಗಲಕೋಟೆ ತಾಲೂಕನ್ನು ತಮ್ಮ ನೋಡಲ್ ತಾಲೂಕನ್ನಾಗಿ ಆಯ್ಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಬುಡಾದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಅದರಂತೆ ಅವರು ನಿಯಮಿತವಾಗಿ ಬುಡಾ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ನಡುವೆ ತಮ್ಮನ್ನು ಬಿಟಿಡಿಎ ಸದಸ್ಯರನ್ನಾಗಿ ಸೇರಿಸಿಕೊಳ್ಳುವಂತೆ ಪೂಜಾರ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಅಲ್ಲದೇ ಸ್ಥಳೀಯ ಶಾಸಕರು ಹಾಗೂ ಬುಡಾ ಅಧ್ಯಕ್ಷರೂ ಸಹ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದರು. ಅದರಂತೆ, ಬಿಟಿಡಿಎ ಸಭೆಗಳಲ್ಲಿ ಭಾಗಿಯಾಗಲು ಅನುಮತಿ ನೀಡಲಾಗಿತ್ತು. ಆದರೆ, ಬುಡಾ ಸದಸ್ಯರಾಗಿರುವ ಪೂಜಾರ ಅವರು ಬಿಟಿಡಿಎ ಸಭೆಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಜಲಸಂಪನ್ಮೂಲ ಇಲಾಖೆಯ ಅಧೀನ ಕಾರ್ಯದರ್ಶಿ 2024ರ ಸೆ.10ರಂದು ಪತ್ರ ಹೊರಡಿಸಿದ್ದರು. ಅದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ತಾವು ಭಾಗವಹಿಸುವಂತಿಲ್ಲ ಎಂದು ಜಲಸಂಪನ್ಮೂಲ ಅಪರ ಮುಖ್ಯ ಕಾರ್ಯದರ್ಶಿಯ ನಿರ್ದೇಶನದಂತೆ ಇಲಾಖೆಯ ಅಧೀನ ಕಾರ್ಯದರ್ಶಿ 2024ರ ಸೆ.10ರಂದು ಪತ್ರ ಹೊರಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಸ್ಥಳೀಯ ಸಂಸ್ಥೆಗಳ ವಿಜಯಪುರ-ಬಾಗಲಕೋಟೆ ಕ್ಷೇತ್ರದಿಂದ ಬಿಜೆಪಿಯ ಎಂಎಲ್‌ಸಿ ಪಿ.ಹೆಚ್. ಪೂಜಾರ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಸುರಕ್ಷತಾ ಷರತ್ತುಗಳ ಪಾಲನೆಗೆ ಖಾಸಗಿ ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷದವರೆಗೂ ಅವಕಾಶ