ಆಲಪ್ಪುಳ (ಕೇರಳ): ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಐವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಡಿಸೆಂಬರ್ 2ರ ರಾತ್ರಿ 9.45ಕ್ಕೆ ಈ ದುರ್ಘಟನೆ ಕಲರ್‌ಕೋಡ್ ಬಳಿ ಸಂಭವಿಸಿದೆ.
ಕಾರಿನಲ್ಲಿ 11 ವೈದ್ಯಕೀಯ ವಿದ್ಯಾರ್ಥಿಗಳಿದ್ದರು. ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದು, ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಐವರು ವೈದ್ಯಕೀಯ ವಿದ್ಯಾರ್ಥಿಗಳ ಮರಣೋತ್ತರ ಪರೀಕ್ಷೆ ಇಂದು (ಡಿಸೆಂಬರ್ 3) ಬೆಳಗ್ಗೆ 9 ಗಂಟೆಗೆ ವಂದನಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಯಲಿದೆ. ಮರಣೋತ್ತರ ಪರೀಕ್ಷೆಯ ನಂತರ ವಿದ್ಯಾರ್ಥಿಗಳ ಮೃತ ದೇಹಗಳನ್ನು ಆಲಪ್ಪುಳದ ವಂದನಂ ವೈದ್ಯಕೀಯ ಕಾಲೇಜಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಬಳಿಕ ಮೃತದೇಹಗಳನ್ನು ಅವರವರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು. ಇನ್ನು ಅಪಘಾತದಲ್ಲಿ ಗಾಯಗೊಂಡ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ನಿನ್ನೆ ರಾತ್ರಿ ಕಲರಕೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ವಿದ್ಯಾರ್ಥಿಗಳು ವಂದನಂನಿಂದ ಚಿತ್ರಮಂದಿರಕ್ಕೆ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ. ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಓವರ್ಟೇಕ್ ಮಾಡಲು ಚಾಲಕ ಮುಂದಾಗಿದ್ದ. ಈ ವೇಳೆ, ಚಾಲಕನ ಕಣ್ಣು ಮಂಜಾಗಿದ್ದು, ಈ ಅಪಘಾತ ಸಂಭವಿಸಿದೆ ಎಂದು ಎಂವಿಡಿ ಅಧಿಕಾರಿಗಳು ಮತ್ತು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತರನ್ನು ಲಕ್ಷದ್ವೀಪದ ಅಂಟ್ರೋತ್‌ನ ಮುಹಮ್ಮದ್ ಇಬ್ರಾಹಿಂ (19), ಪಾಲಕ್ಕಾಡ್‌ನ ಸೆಕರಪುರಂನ ಶ್ರೀದೇವ್ ವತ್ಸನ್ (19), ಕಣ್ಣೂರು ಮಾಟೈನ ಮುಹಮ್ಮದ್ ಜಬ್ಬಾರ್ (19), ಮಲಪ್ಪುರಂ ಕೊಟ್ಟಕಲ್‌ನ ದೇವಾನಂದನ್ (19), ಆಲಪ್ಪುಳದ ಆಯುಷ್ ಶಾಜಿ (19) ಎಂದು ಗುರುತಿಸಲಾಗಿದೆ. ಗಾಯಾಳುಗಳು ವಂದನಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾಯೂರಿನಿಂದ ಕಾಯಂಕುಲಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನ ಟಾಪ್ ಕಟ್ ಮಾಡಿ ವಿದ್ಯಾರ್ಥಿಗಳನ್ನು ಹೊರಗೆ ತೆಗೆಯಲಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಮುಂಭಾಗದ ಕಿಟಕಿಯಿಂದ ಹೊರಗೆ ಹಾರಿ ಬಿದ್ದಿದ್ದಾರೆ. ಬಸ್ ನಲ್ಲಿದ್ದ 12 ಮಂದಿ ಗಾಯಗೊಂಡಿದ್ದಾರೆ. ಆದರೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.