ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್'ನಲ್ಲಿ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯೇ ಹೈಲೆಟ್ ಎನ್ನಬಹುದು. ಶನಿವಾರದ ಎಪಿಸೋಡ್ ನೋಡಲೆಂದೇ ಅಪಾರ ಸಂಖ್ಯೆಯ ಸಿನಿಪ್ರಿಯರು ಕಾದು ಕುಳಿತಿರುತ್ತಾರೆ. ಅಷ್ಟಕ್ಕೂ ಈ ಎಪಿಸೊಡ್ ನಡೆಸಿಕೊಡೋದು ಅಭಿನಯ ಚಕ್ರವರ್ತಿ ಸುದೀಪ್ ಅಲ್ವೇ. ಕಿಚ್ಚ ಅಂದಮೇಲೆ ಕಿಚ್ಚು ಕೂಡಾ ಹೆಚ್ಚೇ. ಈ ಸಾಟರ್ಡೇ ಶೋ ಶೈನ್ ಆಗೋದು ಸುದೀಪ್ ಅವರಿಂದಲೇ ಅಂದ್ರೆ ಅತಿಶಯೋಕ್ತಿಯಲ್ಲ. ಅವರ ವಾಕ್ಚಾತುರ್ಯ ಅಂಥದ್ದು. ಶಬ್ದ ಬಳಕೆಯಲ್ಲಿ ಪಂಡಿತ ಈ ಕನ್ನಡದ ಬಹುಬೇಡಿಕೆ ನಟ.
ಅದರಂತೆ ಇಂದಿನ ಸಂಚಿಕೆ ಮೇಲಿನ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ ಬಿಗ್ ಬಾಸ್ ಪ್ರೋಮೋ. ''ಆಟಕ್ಕೆ ಅಡ್ಡಿ ಮಾಡಿದ್ವಾ ಸಂಬಂಧಗಳು?'' ವಾರದ ಕಥೆ ಕಿಚ್ಚನ ಜೊತೆ. ಇಂದು ರಾತ್ರಿ 9ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಪ್ರೋಮೋ ಅನಾವರಣಗೊಂಡಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸೋ ಪ್ರೇಕ್ಷಕರ ಕಾತರ ಹೆಚ್ಚಿದೆ. ಸುದೀಪ್ ಅವರು ಮೋಕ್ಷಿತಾ, ಮಂಜು, ಗೌತಮಿಗೆ ಫ್ರೆಂಡ್ಶಿಪ್ ಕ್ಲಾಸ್ ಕೊಟ್ಟಿದ್ದಾರೆ.
ಪ್ರೋಮೋದಲ್ಲಿ, ಮಂಜು ಮತ್ತು ಮೋಕ್ಷಿತಾ ಅವ್ರೇ, ಪರ್ಸನಲ್, ಪರ್ಸನಲ್, ಪರ್ಸನಲ್ ಎಂದು ಸುದೀಪ್ ಅಸಮಧಾನಗೊಂಡಿದ್ದಾರೆ. ಟಾಸ್ಕ್ನಲ್ಲಿ, ವೈಯಕ್ತಿಕ ಮನಸ್ತಾಪಗಳನ್ನು ತರುವ ಅಗತ್ಯವಿತ್ತೇ ಎಂಬಂತಿತ್ತು ಕಿಚ್ಚನ ಈ ಮಾತು. ಅದಕ್ಕೆ ಮಂಜಣ್ಣನ ಮಾತುಗಳು ನನಗೆ ತುಂಬಾನೇ ಹರ್ಟ್ ಆಗಿದೆ ಸರ್, ಹರ್ಟ್ ಆದ್ಮೇಲೆನೇ ನಾನು ಆ ರೀತಿ ರಿಯಾಕ್ಟ್ ಮಾಡಲು ಶುರು ಮಾಡಿದೆ ಎಂದು ಮೋಕ್ಷಿತಾ ತಿಳಿಸಿದ್ದಾರೆ. ನಂತರ, ಯುವರಾಣಿ ಕಣ್ಣಲ್ಲಿ ಕಣ್ಣಿಟ್ಟು ನೋಡಬಾರದು ಎಂದು ಆದೇಶಿಸಿದಾಗ ಗೌತಮಿ ಅವರು ನಿರಾಕರಿಸಿದ್ದೇಕೆ ಎಂಬ ಪ್ರಶ್ನೆಯನ್ನು ಸುದೀಪ್ ಎತ್ತಿದ್ದಾರೆ. ಮಹಾರಾಜ ಆಗಿ ಬೇರೆಯವರಿಗೆ ಆದೇಶ ಕೊಟ್ಟಂತೆ ತಾವು ಕೊಡಬೇಕಿತ್ತು, ಹೇಳ್ದಷ್ಟು ಮಾಡಿ ಅಂತಾ (ಮಂಜು ಬಗ್ಗೆ ಮಾತನಾಡಿರೋದು), ಪ್ರಜೆ ಮಾತಾಡ್ತಿದ್ರೋ ಅಥವಾ ಗೌತಮಿ ಮಾತನಾಡುತ್ತಿದ್ರೋ?. ಸಂಬಂಧ, ಸಂಬಂಧ, ಸಂಬಂಧ ಅಂತೀರಾ. ಆಮೇಲೆ ನನಗೆ ಮೋಸ ಆಯ್ತು, ನಂಬಿಕೆ ದ್ರೋಹ ಆಯ್ತು ಅಂತೀರ. ಯಾರ್ ಹೇಳಿದ್ದು ನಂಬಿ ಅಂತಾ ಎಂದು ಕಿಚ್ಚ ಖಡಕ್ ಆಗಿ ಕೇಳಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ ಸಿನಿಸುಗ್ಗಿ: ಯುಐ, ಮ್ಯಾಕ್ಸ್ to ಪುಷ್ಪ 2; ಬಿಡುಗಡೆ ಹೊಸ್ತಿಲಲ್ಲಿರುವ ಸೂಪರ್ ಸ್ಟಾರ್ಸ್ ಸಿನಿಮಾಗಳಿವು
ಮೋಕ್ಷಿತಾ, ಮಂಜು, ಗೌತಮಿ ಅವರ ನಡುವೆ ಉತ್ತಮ ಸ್ನೇಹ ಇತ್ತು. ಆತ್ಮೀಯರಾಗಿ ಗುರುತಿಸಿಕೊಂಡಿದ್ದರು. ಆದ್ರೆ ಎರಡು ವಾರಗಳಿಂದ ಮೋಕ್ಷಿತಾ ಈ ಗುಂಪಿನಿಂದ ಹೊರಬಂದಿದ್ದಾರೆ. ಮಂಜು ಮೇಲಿನ ಅಸಮಧಾನವನ್ನು ಒಂದಲ್ಲ ಒಂದು ರೀತಿಯಲ್ಲಿ ತೋರಿಸುತ್ತಿದ್ದಾರೆ. ಈ ಬಗ್ಗೆ ಸೊಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಚರ್ಚೆ ನಡೆದಿದೆ. ಕಳೆದ ದಿನ ಬಿಗ್ ಬಾಸ್ ''ನಿಮ್ಮ ಅನಿಸಿಕೆಗಳಿಗಾಗಿ ಕಮೆಂಟ್ ಬಾಕ್ಸ್ ಓಪನ್ ಇದೆ!'' ಎಂಬ ಕ್ಯಾಪ್ಷನ್ನೊಂದಿಗೆ ವಿಡಿಯೋವೊಂದನ್ನು ಅನಾವರಣಗೊಳಿಸಿದ್ದರು. ಕಮೆಂಟ್ ಬಾಕ್ಸ್ನಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಪೌರಾಣಿಕ ಚಿತ್ರಗಳೆಡೆ ಚಿತ್ರರಂಗದ ಗಮನ: ರಿಷಬ್ ಶೆಟ್ಟಿ 'ಜೈ ಹನುಮಾನ್' ಮೇಲಿದೆ ಬೆಟ್ಟದಷ್ಟು ನಿರೀಕ್ಷೆಗಳು