ಬಳ್ಳಾರಿ: ತಾಲೂಕಿನ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ವಿಡುಪನಕಲ್ಲು - ಚೇಳ್ಳಗುರ್ಕಿ ಮಧ್ಯೆ ಇಂದು ಬೆಳಗಿನ ಜಾವ ಭೀಕರ ಅಪಘಾತ ಸಂಭವಿಸಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿ, ಮತ್ತೋರ್ವ ಗಾಯಗೊಂಡಿದ್ದಾರೆ.
ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯ ಕ್ಯಾನ್ಸರ್ ವೈದ್ಯ ಡಾ. ಗೋವಿಂದರಾಜುಲು, ನೇತ್ರ ತಜ್ಞ ಡಾ.ಯೋಗೀಶ್ ಮತ್ತು ವಕೀಲ ವೆಂಕಟನಾಯ್ಡು ಸ್ಥಳದಲ್ಲೇ ಮೃತಪಟ್ಟವರು. ಖಾಸಗಿ ವೈದ್ಯ, ಗಂಧರ್ವ ಗಿರಿ ಎಸ್ಟೇಟ್ ಮಾಲೀಕ ಡಾ. ಅಮರೇಗೌಡ ಪಾಟೀಲ್ ಅವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಓರ್ವ ವಕೀಲ, ಮೂವರು ವೈದ್ಯರು ಸೇರಿ ನಾಲ್ವರು ಬ್ಯಾಂಕಾಕ್ ಪ್ರವಾಸ ಮುಗಿಸಿಕೊಂಡು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು, ಅನಂತಪುರ ಮಾರ್ಗವಾಗಿ ಬಳ್ಳಾರಿಗೆ ಆಗಮಿಸುತ್ತಿದ್ದರು. ಚೇಳ್ಳಗುರ್ಕಿ ಇನ್ನು ಐದು ಕಿಲೋ ಮೀಟರ್ ಇರುವಾಗ ಕಾರು ನಿಯಂತ್ರಣ ತಪ್ಪಿ ಬೆಳಗಿನ ಜಾವ 4 ಗಂಟೆಗೆ ಮರಕ್ಕೆ ಗುದ್ದಿದ ಪರಿಣಾಮ ದುರಂತ ಸಂಭವಿಸಿದೆ.
ಅಪಘಾತದ ಮಾಹಿತಿ ನೀಡಿದ ಐ ಫೋನ್: ಅಮರೇಗೌಡ ಅವರು ಐ ಫೋನ್ ಹೊಂದಿದ್ದು, ಅಪಘಾತ ಆದ ತಕ್ಷಣ ಸಂಬಂಧಿಕರಿಗೆ ಸಂದೇಶ ಕಳುಹಿಸಿದೆ. ಇದರಿಂದಾಗಿ ಸಂಬಂಧಿಕರಿಗೆ ಬೇಗನೇ ಮಾಹಿತಿ ಗೊತ್ತಾಗಿದೆ. ಅಮರೇಗೌಡ ಅವರು ಗಾಯಗೊಂಡಿದ್ದು, ಬಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಡಾ. ಗೋವಿಂದರಾಜುಲು ಅವರು ಈ ಭಾಗದಲ್ಲಿ ಕ್ಯಾನ್ಸರ್ ಚಿಕಿತ್ಸೆ ನೀಡುವಲ್ಲಿ ಖ್ಯಾತರಾಗಿದ್ದರು. ಬಡ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಅವರು ಜನಮೆಚ್ಚುಗೆ ಗಳಿಸಿದ್ದರು. ಇವರ ಸಾವಿಗೆ ಬಿಮ್ಸ್ ನಿರ್ದೇಶಕ ಡಾ. ಗಂಗಾಧರಗೌಡ ಮತ್ತು ಸಿಬ್ಬಂದಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ: 9 ಮಂದಿ ಸಾವು, 25ಕ್ಕೂ ಹೆಚ್ಚು ಮಂದಿಗೆ ಗಾಯ