ಹೈದರಾಬಾದ್:ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಮಾಡಿದ ಪ್ರಕರಣದ ಬಗ್ಗೆ ಪೊಲೀಸರು ಹೊಸ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಸಲ್ಮಾನ್ರನ್ನು ಹೆದರಿಸುವ ತಂತ್ರ ಇದಾಗಿತ್ತು. ಇದರ ಹಿಂದೆ ಹತ್ಯೆ ಮಾಡುವ ಉದ್ದೇಶ ಇರಲಿಲ್ಲ" ಎಂದು ತಿಳಿಸಿದ್ದಾರೆ.
ನಟನ ಮನೆ ಮೇಲೆ 6 ಸುತ್ತಿನ ಗುಂಡು ಹಾರಿಸಲಾಗಿತ್ತು. ಇದು ಕುಟುಂಬಸ್ಥರು ಸೇರಿ ಅಭಿಮಾನಿಗಳಲ್ಲಿ ಭಾರೀ ಆತಂಕವನ್ನು ಉಂಟು ಮಾಡಿತ್ತು. ಇದರ ಬೆನ್ನಲ್ಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದಾಳಿಯ ವೇಳೆ ನಟನ ಹತ್ಯೆ ಮಾಡುವ ಉದ್ದೇಶ ಹೊಂದಿರಲಿಲ್ಲ. ಹೆದರಿಸುವ ಪ್ರಯತ್ನ ನಮ್ಮದಾಗಿತ್ತು ಎಂದು ಆರೋಪಿಗಳು ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಶಂಕಿತರ ವಿಚಾರಣೆ:ಆರೋಪಿಗಳು ಬಿಹಾರ ಮೂಲದವರಾಗಿದ್ದು, ಅವರ ಕುಟುಂಬಸ್ಥರು ಸೇರಿ ಹೆಚ್ಚಿನ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಯ ಪ್ರಕಾರ, ಹೆಚ್ಚಿನ ವಿಚಾರಣೆಗಾಗಿ ಹರಿಯಾಣ ಮತ್ತು ಇತರ ರಾಜ್ಯಗಳಿಂದ 7 ಜನರನ್ನು ವಿಚಾರಣೆಗೆ ಕರೆಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಮಧ್ಯೆ, ನಟ ಸಲ್ಮಾನ್ ಖಾನ್ ಹೇಳಿಕೆಯನ್ನು ಮುಂಬೈ ಕ್ರೈಂ ಬ್ರಾಂಚ್ ಪ್ರಕರಣದಲ್ಲಿ ಸಾಕ್ಷಿಯಾಗಿ ದಾಖಲಿಸಿಕೊಂಡಿದ್ದಾರೆ. ಗುಂಡಿನ ದಾಳಿಯ ನಂತರ ಮುಂಬೈ ಪೊಲೀಸ್ ಅಧಿಕಾರಿಗಳು ಸಲ್ಮಾನ್ ಮನೆಗೆ ಬಂದಾಗ ಅವರು ಕೋಪ ಮತ್ತು ಕುಟುಂಬದ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಮುಂಬೈ ಪೊಲೀಸರು ನೀಡಿದ ರಕ್ಷಣೆಯ ಮಟ್ಟವನ್ನು ಅವರು ಪ್ರಶ್ನಿಸಿದ್ದಾರೆ. ಮನೆಗೆ ಸಾಕಷ್ಟು ಭದ್ರತಾ ವ್ಯವಸ್ಥೆ, ಸಿಬ್ಬಂದಿ ಇದ್ದರೂ ಘಟನೆ ಸಂಭವಿಸಿರುವುದು ಅಚ್ಚರಿ ಉಂಟು ಮಾಡಿದ್ದಾಗಿ ಅವರು ಹೇಳಿದ್ದಾರೆ.