ಬೆಂಗಳೂರು:ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತಿರುವ ನಟ ದರ್ಶನ್ ಮತ್ತು ಸಹವರ್ತಿಗಳ ಸೆರೆಮನೆವಾಸ ಮುಂದುವರಿದಿದೆ. ದರ್ಶನ್ ಸೇರಿ 17 ಮಂದಿ ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಿ 24ನೇ ಎಸಿಎಂಎಂ ನ್ಯಾಯಾಲಯ ಇಂದು ಆದೇಶ ಹೊರಡಿಸಿದೆ.
ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯವಾದ ಹಿನ್ನೆಲೆ ಆರೋಪಿಗಳೆಲ್ಲರೂ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದೆದುರು ಹಾಜರಾದರು. ಪೊಲೀಸರ ಪರ ವಕೀಲರು, ತಾಂತ್ರಿಕ ಸಾಕ್ಷ್ಯಾಧಾರಗಳು ಹಾಗೂ ಸಿಎಫ್ಎಸ್ಎಲ್ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದರು.
ವಾದ ಆರಂಭಿಸಿದ ದರ್ಶನ್ ಪರ ವಕೀಲ, ಬಳ್ಳಾರಿ ಜೈಲಿನಲ್ಲಿ ತಮ್ಮ ಕಕ್ಷಿದಾರರಿಗೆ ಕನಿಷ್ಠ ಮೂಲಸೌಕರ್ಯಗಳನ್ನೂ ಒದಗಿಸಿಲ್ಲ. ಸರಿಯಾಗಿ ಕುಳಿತುಕೊಳ್ಳುವುದಕ್ಕೆ ಚೇರ್ ನೀಡಿಲ್ಲ. ಕುಟುಂಬದ ಆಪ್ತ ಸ್ನೇಹಿತರಿಗೆ ಭೇಟಿಗೆ ಅನುಮತಿ ನೀಡುತ್ತಿಲ್ಲ. ಪತ್ನಿ ಹಾಗೂ ಸಹೋದರರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ಕೂಡಾ ಭೇಟಿಗೆ ಅನುವು ಮಾಡಿಕೊಡುತ್ತಿಲ್ಲ. ಕಾರಾಗೃಹ ಇಲಾಖೆಯ ಡಿಐಜಿ, ನ್ಯಾಯಾಧೀಶರ ಮನವಿವಿಲ್ಲದೇ ಮೆಮೊ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಹೈ ಸೆಕ್ಯೂರಿಟಿ ಕಾರಣ ನೀಡಿದ್ದಾರೆ. ದೇಶ ವಿರೋಧಿ ಅಥವಾ ಕೋಕಾ ಪ್ರಕರಣಗಳಲ್ಲಿ ದರ್ಶನ್ ಬಂಧನವಾಗಿಲ್ಲ. ಎನ್ಐಎ ಕೇಸ್ಗಳಲ್ಲಿನ ಆರೋಪಿಗಳಿಗೆ ಚೇರ್ ವ್ಯವಸ್ಥೆ ಕಲ್ಪಿಸಲಾಗಿದೆ. ಹತ್ಯೆ ಪ್ರಕರಣದ ಆರೋಪಿ ದರ್ಶನ್ಗೆ ಚೇರ್ ಕಲ್ಪಿಸಿಲ್ಲ ಎಂದು ಮಾಹಿತಿ ನೀಡಿದರು.