'ಬ್ರಹ್ಮಗಂಟು' ಖ್ಯಾತಿಯ ಗೀತಾ ಭಾರತಿ ಭಟ್ ಅಭಿನಯದ ಹಾಗೂ ಸಂತೋಷ್ ಕೊಡೆಂಕೇರಿ ನಿರ್ದೇಶನದ ''ರವಿಕೆ ಪ್ರಸಂಗ'' ಸಿನಿಮಾ ಕಳೆದ ಫೆಬ್ರವರಿ 16ರಂದು ಬಿಡುಗಡೆ ಆಗಿ ಸಿನಿಪ್ರೇಕ್ಷಕರಿಂದ ಬಹುತೇಕ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹೆಣ್ಣುಮಕ್ಕಳಿಗೆ ಸೀರೆಯಷ್ಟೇ ರವಿಕೆಯೂ ಅಚ್ಚುಮೆಚ್ಚು. ಈ ರವಿಕೆಯ ಸುತ್ತ ಹೆಣೆಯಲಾದ ಕಥೆಯೇ "ರವಿಕೆ ಪ್ರಸಂಗ". ರವಿಕೆಯ ಕುರಿತಾದ ಸಿನಿಮಾ ಆಗಿರುವುದರಿಂದ ಚಿತ್ರತಂಡ ವಿಶೇಷ ಡಿಸೈನ್ನ ರವಿಕೆ ಹೊಲಿಯುವವರಿಗಾಗಿ ಸ್ಪರ್ಧೆ ಆಯೋಜಿಸಿತ್ತು. ಇದೀಗ ವಿಜೇತರಿಗೆ ಹೊಲಿಗೆ ಯಂತ್ರ, ನಗದು ಸೇರಿದಂತೆ ಅನೇಕ ಬಹುಮಾನಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ನಿರ್ದೇಶಕ ಸಂತೋಷ್ ಕೊಡೆಂಕೇರಿ, ಕಥೆ ಬರೆದಿರುವ ಪಾವನ ಸಂತೋಷ್, ನಟಿ ಗೀತಾ ಭಾರತಿ ಭಟ್, ಉದ್ಯಮಿ ಮತ್ತು ರಾಧಾಕೃಷ್ಣ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕರಾದ ಗಿರೀಶ್, ಶಿವರುದ್ರಯ್ಯ, ಕಂದಯ್ಯ ಶೆಟ್ಟಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಇದೇ ವೇಳೆ ಚಿತ್ರತಂಡದ ತಮ್ಮ ಚಿತ್ರದ ಕೆಲ ವಿಚಾರಗಳನ್ನು ಹಂಚಿಕೊಂಡಿದೆ.
ನಿರ್ದೇಶಕ ಸಂತೋಷ್ ಕೊಡೆಂಕೇರಿ ಮಾತನಾಡಿ, ನಮ್ಮ ಚಿತ್ರ ನೋಡಿದವರು ಹಾಗೂ ಮಾಧ್ಯಮದವರು ಮೆಚ್ಚಿಕೊಂಡಿದ್ದಾರೆ. ಆದರೆ, ಕೆಲವರು ಈ ವಾರದಲ್ಲಿ ವೀಕ್ಷಿಸಲಿದ್ದೇವೆ ಎನ್ನುತ್ತಿದ್ದಾರೆ. ಹಾಗಾಗಿ ರವಿಕೆ ಪ್ರಸಂಗವನ್ನು ಚಿತ್ರಮಂದಿರಗಳಲ್ಲಿ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಚಿತ್ರಮಂದಿರಕ್ಕೆ ಹೆಚ್ಚು ಜನರು ಬರಬೇಕು. ಒಳ್ಳೆ ಕಂಟೆಂಟ್ ಉಳ್ಳ ಚಿತ್ರ ಮಾಡಿದ್ದೇವೆ. ದಯವಿಟ್ಟು ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.
ಈ ಮಧ್ಯೆ, ಲಕ್ಷಾಂತರ ರೂಪಾಯಿ ಪಡೆದು ಚಿತ್ರಮಂದಿರವನ್ನು ಜನರಿಂದ ಭರ್ತಿ ಮಾಡಲು ಕೆಲವು ಏಜನ್ಸಿಗಳಿವೆ. ಆದರೆ ಈ ಏಜೆನ್ಸಿಗಳಿಗೆ ಯಾವುದೇ ರೀತಿಯ ಮಾನದಂಡಗಳಿರುವುದಿಲ್ಲ. ಆ ರೀತಿ ಜನರನ್ನು ತುಂಬಿಸುವುದರಿಂದ ಏನೂ ಪ್ರಯೋಜನವಾಗುವುದಿಲ್ಲ. ಅಲ್ಲಿ ಬರುವ ಯಾರೂ ಕೂಡ ಸಿನಿಮಾ ನೋಡುವುದೂ ಇಲ್ಲ. ಅದರ ಬಗ್ಗೆ ಪ್ರಚಾರ ಮಾಡುವುದೂ ಇಲ್ಲ. ಈ ರೀತಿ ಜನ ತುಂಬಿಸುವ ಪ್ರಕ್ರಿಯೆಯನ್ನು ನಿಲ್ಲಿಸಲು ಸಂಬಂಧಪಟ್ಟವರು ಕ್ರಮ ತೆಗೆದುಕೊಳ್ಳಲು ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.