ನವದೆಹಲಿ: ದೆಹಲಿಯಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಆಮ್ ಆದ್ಮಿ ಪಕ್ಷವು (ಆಪ್) ಪಂಜಾಬ್‌ನಲ್ಲಿ ಭಿನ್ನಮತದ ಬಿಸಿ ಎದುರಿಸುತ್ತಿರುವ ವದಂತಿ ಹಬ್ಬಿದೆ. 20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ಹೇಳಿರುವ ಬೆನ್ನಲ್ಲೇ, ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸಿಎಂ ಭಗವಂತ್ ಮಾನ್, ಶಾಸಕರ ಜೊತೆ ದೆಹಲಿಯಲ್ಲಿ ಇಂದು (ಮಂಗಳವಾರ) ಸಭೆ ನಡೆಸುತ್ತಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆ ಸೋಲಿನ ಪರಾಮರ್ಶೆ ಮತ್ತು 2027ರ ಪಂಜಾಬ್ ವಿಧಾನಸಭೆ ಚುನಾವಣೆಗೆ ಸಿದ್ಧತೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಪಂಜಾಬ್ ಸಂಸದ ರಾಘವ್ ಚಡ್ಡಾ ಮತ್ತು ಸಂದೀಪ್ ಪಾಠಕ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದಾರೆ.
ಪಂಜಾಬ್‌ನ ಸಂಗ್ರೂರ್ ಶಾಸಕಿ ನರಿಂದರ್ ಕೌರ್ ಅವರು ಪಕ್ಷದಲ್ಲಿನ ಆಂತರಿಕ ಭಿನ್ನಮತ ವರದಿಗಳನ್ನು ತಳ್ಳಿಹಾಕಿದರು. "ದೆಹಲಿಯಲ್ಲಿ ನಡೆಯುತ್ತಿರುವ ಸಭೆ ಪಕ್ಷದ ನಿಯಮಿತ ಬೈಠಕ್ ಆಗಿದೆ. ದೆಹಲಿ ಜನಾದೇಶವನ್ನು ಸ್ವೀಕರಿಸುತ್ತೇವೆ. ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ನಿರ್ವಹಿಸುತ್ತೇವೆ. ಪಂಜಾಬ್ ಮತ್ತು ದೆಹಲಿಯಲ್ಲಿ ಇಂತಹ ಸಭೆಗಳು ಈ ಹಿಂದೆಯೂ ನಡೆದಿವೆ" ಎಂದು ಹೇಳಿದರು.
ಆಪ್ನಲ್ಲಿ ಭಿನ್ನಮತವಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, "ಸತತ ಮೂರು ವರ್ಷ ಅಧಿಕಾರ ನಡೆಸಿದ್ದ ಕಾಂಗ್ರೆಸ್, ಮೂರು ಬಾರಿ ಶೂನ್ಯ ಸ್ಥಾನ ಪಡೆದಿದ್ದರ ಬಗ್ಗೆ ಚಿಂತನೆ ನಡೆಸಬೇಕು. ನಮ್ಮ ಪಕ್ಷದಲ್ಲಿನ ಸಮಸ್ಯೆಗಳ ಬಗ್ಗೆ ನಾವೇ ನಿರ್ಧರಿಸುತ್ತೇವೆ. ಈ ಬಗ್ಗೆ ಯಾರ ಸಲಹೆಯೂ ಬೇಕಾಗಿಲ್ಲ" ಎಂದರು.
ಕೇಜ್ರಿವಾಲ್ಗೆ ಪಂಜಾಬ್ ಸಿಎಂ ಸ್ಥಾನ?: ದೆಹಲಿ ಚುನಾವಣೆಯಲ್ಲಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೋಲು ಅನುಭವಿಸಿದ ಬಳಿಕ ಪಂಜಾಬ್ ಸಿಎಂ ಆಗಲಿದ್ದಾರೆ ಎಂಬ ಊಹಾಪೋಹ ಹಬ್ಬಿದೆ. ಸದ್ಯ ಖಾಲಿ ಇರುವ ಲೂದಿಯಾನ ವಿಧಾನಸಭಾ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿ, ಭಗವಂತ್ ಮಾನ್ ಅವರ ಸ್ಥಾನಕ್ಕೆ ಕೂರಿಸುವ ಸಾಧ್ಯತೆ ಇದೆ ಎಂದು ವದಂತಿ ಹರಿದಾಡುತ್ತಿದೆ. ಆದರೆ, ಇದನ್ನು ಪಕ್ಷ ನಿರಾಕರಿಸಿದೆ.
ಪಂಜಾಬ್ ಆಪ್ನಲ್ಲಿ ಭಿನ್ನಮತವಿಲ್ಲ- ಸಿಎಂ ಮಾನ್: ಪಂಜಾಬ್ ಆಪ್ನಲ್ಲಿ ಭಿನ್ನಮತವಿದೆ ಎಂಬ ವದಂತಿಯನ್ನು ಮುಖ್ಯಮಂತ್ರಿ ಭಗವಂತ್ ಮಾನ್ ತಳ್ಳಿ ಹಾಕಿದ್ದಾರೆ. "ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ನಡುವೆ ಉತ್ತಮ ಬಾಂಧವ್ಯವಿದೆ" ಎಂದು ಪ್ರತಿಪಾದಿಸಿದ್ದಾರೆ.
#WATCH | Delhi: After meeting AAP National Convenor Arvind Kejriwal, Punjab CM Bhagwant Mann says, " ... arvind kejriwal thanked the mlas for their work in the delhi elections... punjab government is working for the welfare of the people... even today, the people of delhi say that… pic.twitter.com/TFcUlBeYgE
— ANI (@ANI) February 11, 2025
ದೆಹಲಿಯಲ್ಲಿ ಪಕ್ಷದ ಸಭೆಗೂ ಮೊದಲು ಮಾತನಾಡಿದ ಅವರು, "ನಮ್ಮ 20 ಶಾಸಕರು ಕಾಂಗ್ರೆಸ್ನ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತದೆ. ಮೊದಲು ಕಾಂಗ್ರೆಸ್ ತನ್ನ ಶಾಸಕರನ್ನು ಉಳಿಸಿಕೊಳ್ಳುವ ಯತ್ನ ಮಾಡಲಿ. ಈ ಹಿಂದೆಯೂ 40 ಶಾಸಕರು ಆಪ್ ಶಾಸಕರ ಸೆಳೆಯಲು ಯತ್ನ ನಡೆಸಿ ವಿಫಲವಾಗಿತ್ತು. ರಾಜ್ಯದ ಅಭಿವೃದ್ಧಿಗಾಗಿ ಪಕ್ಷವು ಒಗ್ಗಟ್ಟಾಗಿರಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಂದು ದಶಕದ ಕಾಲ ದೆಹಲಿಯನ್ನು ಆಳಿದ ಎಎಪಿ, ಈಚೆಗೆ ಮುಗಿದ ವಿಧಾನಸಭೆ ಚುನಾವಣೆಯಲ್ಲಿ 70 ಸ್ಥಾನಗಳಲ್ಲಿ ಕೇವಲ 22ರಲ್ಲಿ ಗೆದ್ದು ಅಧಿಕಾರ ಕಳೆದುಕೊಂಡಿದೆ. 27 ವರ್ಷಗಳ ಬಳಿಕ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರಿದೆ.
ಇದನ್ನೂ ಓದಿ: ಎದ್ದಲ್ಲೇ ಬಿದ್ದ ಆಮ್ ಆದ್ಮಿ : ದೆಹಲಿಯಲ್ಲಿ ಹುಟ್ಟಿದ ಪಕ್ಷಕ್ಕೆ ಅಲ್ಲೇ ಸೋಲು, ಪಂಜಾಬಲ್ಲಿ ಮಾತ್ರ ಅಧಿಕಾರ
ದೆಹಲಿ ಗದ್ದುಗೆಯಿಂದ ಆಪ್ ಅನ್ನೇ ಗುಡಿಸಿ ಹಾಕಿದ ಬಿಜೆಪಿ: ಮಿತ್ರ ಪಕ್ಷಕ್ಕೆ ಕಾಂಗ್ರೆಸ್ ತಂದ ಆಪತ್ತೇನು?