ಬಲೂಚಿಸ್ತಾನ, ಪಾಕಿಸ್ತಾನ: ರಸ್ತೆ ಬದಿಯಲ್ಲಿ ಅಡಗಿಸಿಟ್ಟಿದ್ದ ಬಾಂಬ್ ಸ್ಫೋಟಿಸಿ 9 ಕಾರ್ಮಿಕರು ಸಾವನ್ನಪ್ಪಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ವರದಿಯಾಗಿದೆ.
ಕಲ್ಲಿದ್ದಲು ಗಣಿ ಕಾರ್ಮಿಕರನ್ನು ಟ್ರಕ್ನಲ್ಲಿ ಕರೆದೊಯ್ಯುವಾಗ ಬಾಂಬ್ ಸ್ಫೋಟಗೊಂಡಿದೆ. ಐಇಡಿಯ ಬಾಂಬ್ ಅನ್ನು ರಸ್ತೆ ಬದಿಯಲ್ಲಿ ಅಡಗಿಸಿಟ್ಟಿರುವ ಸಾಧ್ಯತೆಗಳಿಂದಾಗಿ ಈ ದುರಂತ ಸಂಭವಿಸಿದೆ ಎಂದು ಹರ್ನಾಯಿ ಜಿಲ್ಲಾ ಆಯುಕ್ತರಾದ ಹಜರತ್ ವಾಲಿ ಕಾಕರ್ ತಿಳಿಸಿದ್ದಾರೆ.
ಘಟನೆಯಲ್ಲಿ 9 ಮಂದಿ ಸ್ಥಳದಲ್ಲಿ ಸಾವನ್ನಪ್ಪಿದ್ದು, ಗಾಯಗೊಂಡ ಏಳು ಮಂದಿ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿದ್ದು, ಈ ಕುರಿತು ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಲೂಚಿಸ್ತಾನ್ ಸರ್ಕಾರದ ವಕ್ತಾರ ಶಹೀದ್, ಇದೊಂದು ದುರಂತ ಘಟನೆಯಾಗಿದೆ ಎಂದು ದುಃಖ ವ್ಯಕ್ತಪಡಿಸಿದ್ದು, ಈ ಕುರಿತು ತನಿಖೆ ಆರಂಭಿಸಲಾಗಿದೆ ಎಂದಿದ್ದಾರೆ.
ಈ ದಾಳಿಯ ಹೊಣೆಯನ್ನು ಯಾವುದೇ ಗುಂಪು ಹೊತ್ತಿಲ್ಲ. ಆದರೆ, ಬಲೂಚ್ ಲಿಬರೇಶನ್ ಆರ್ಮಿ ಇದೇ ರೀತಿ ಈ ಹಿಂದೆ ನಡೆದ ಕಾನೂನುಬಾಹಿರ ಕೃತ್ಯಗಳನ್ನು ಎಸೆಗಿದೆ ಎಂದು ಆರೋಪಿಸಲಾಗಿತ್ತು.
ಬಲೋಚಿಸ್ಥಾನದ ಹರ್ನಾಯಿಯಲ್ಲಿ ಇದೇ ರೀತಿಯ ಬಾಂಬ್ ಸ್ಫೋಟದ ಪ್ರಕರಣಗಳು ಇತ್ತೀಚಿಗೆ ವರದಿಯಾಗಿವೆ. ಈ ಪ್ರದೇಶದಲ್ಲಿ ನಡೆಯುತ್ತಿರುವ ಗಣಿ ಕೆಲಸಕ್ಕೆ ಅಡ್ಡಿ ಮಾಡುವ ಉದ್ದೇಶದಿಂದ ಈ ದಾಳಿ ನಡೆಸಿರುವ ಸಾಧ್ಯತೆಗಳಿವೆ ಎಂದು ಆರೋಪಿಸಲಾಗುತ್ತಿದೆ. ಮತ್ತೆ ಕೆಲವರು ಶಂಕಿಸದಂತೆ ಈ ಕೆಲಸಗಾರರು ಬಲೂಚಿಸ್ತಾನ ಮೂಲದವರಲ್ಲದ ಕಾರಣ ಈ ದಾಳಿ ನಡೆದಿರುವ ಸಾಧ್ಯತೆಗಳಿವೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಗಣಿ ಇಲಾಖೆ ಪ್ರಕಾರ, ಸಾವನ್ನಪ್ಪಿದವರೆಲ್ಲ ಖೈಬರ್ ಪಖ್ತುಂಖ್ವಾದ ಸ್ವತ್ ಮತ್ತು ಶಂಗಲ ಮೂಲದವರಾಗಿದ್ದಾರೆ.
ಇದನ್ನೂ ಓದಿ: ದೇಶೀ ನಿರ್ಮಿತ ಪಿನಾಕಾ ರಾಕೆಟ್ ಅಧ್ಯಯನಕ್ಕಾಗಿ ಭಾರತಕ್ಕೆ ಬರುವಂತೆ ಫ್ರೆಂಚ್ ಸೈನ್ಯಕ್ಕೆ ಮೋದಿ ಆಹ್ವಾನ
ಇದನ್ನೂ ಓದಿ: ಪ್ರಧಾನಿ ಮೋದಿ ನನಗಿಂತ ಹೆಚ್ಚು ಕಠಿಣ ಸಂಧಾನಕಾರರು:ಅಮೆರಿಕ ಅಧ್ಯಕ್ಷ ಟ್ರಂಪ್ ಬಣ್ಣನೆ