ಸ್ಯಾಂಡಲ್‌ವುಡ್‌ನ ಅದ್ಭುತ ಕಲಾವಿದರ ಪೈಕಿ ಹಿರಿಯ ನಟ ರಂಗಾಯಣ ರಘು ಓರ್ವರು. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ಇವರಿಗೆ ಇದೀಗ ಅಭಿನಯಾಸುರು ಎಂಬ ಬಿರುದು ನೀಡಿ ಗೌರವಿಸಲಾಗಿದೆ. ಸಂದೀಪ್ ಸುಂಕದ್ ಚೊಚ್ಚಲ ಹೆಜ್ಜೆ ಶಾಖಾಹಾರಿ. ಈ ಸಿನಿಮಾದಲ್ಲಿ ರಂಗಾಯಣ ರಘು ಗಂಭೀರ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸನ್ನದ್ಧರಾಗಿದ್ದಾರೆ. ಇದೇ ತಿಂಗಳ 16ರಂದು ಮಲೆನಾಡ ಸೊಗಡಿನ ಥ್ರಿಲ್ಲಿಂಗ್ ಕಥಾಹಂದರದ ಈ ಸಿನಿಮಾ ತೆರೆಗೆ ಬರ್ತಿದೆ. ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಅದರ ಭಾಗವೆಂಬಂತೆ ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ನಿರ್ದೇಶಕ ಸುಕ್ಕ ಸೂರಿ ವಿಶೇಷ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಸಾಥ್ ಕೊಟ್ಟರು. ಇದೇ ವೇಳೆ ರಂಗಾಯಣ ರಘು ಅವರಿಗೆ ಶಾಖಾಹಾರಿ ಸಿನಿ ಬಳಗ ಅಭಿನಯಾಸುರ ಎಂಬ ಬಿರುದು ನೀಡಿ ಗೌರವಿಸಿತು. ಇಲ್ಲಿವರೆಗೂ ಯಾವುದೇ ಚಿತ್ರತಂಡ ಅವರಿಗೆ ಈ ರೀತಿ ಬಿರುದು ಕೊಟ್ಟಿರಲಿಲ್ಲ. ಇದೇ ಮೊದಲ ಬಾರಿಗೆ ಅವರ ಕಲಾಸೇವೆಗೆ ಚಿತ್ರತಂಡ ಈ ರೀತಿ ಗೌರವ ಸೂಚಿಸಿದೆ.
ಇದೇ ವೇಳೆ ಮಾತನಾಡಿದ ನಿರ್ದೇಶಕ ದುನಿಯಾ ಸೂರಿ, "ನಾನು ಈ ರೀತಿ ಮೈಕ್ ಹಿಡಿದು ಮಾತನಾಡುತ್ತಿದ್ದೇನೆ. ನನ್ನ ನಿರ್ದೇಶಕ ಅಂತಾ ಕರೆಯುತ್ತಾರೆ ಎಂದರೆ. ಈ ಹಿಂದೆ ನಾವು ಯೋಗರಾಜ್ ಭಟ್ ಅವರ ಮಣಿ ಸಿನಿಮಾ ಮಾಡಬೇಕಾದರೆ ರಘು ಸರ್ ಸಿಕ್ತಾರೆ. ನಮಗೆ ಅಲ್ಲಿಂದ ದೊಡ್ಮನೆ ಹುಡುಗ ಸಿನಿಮಾದವರೆಗೂ ಜೊತೆಯಲಿ ಇದ್ದರು. ಈ ನಡುವೆ ಅಣ್ಣ ಮಾಡುವ ಪಾತ್ರ ಇಲ್ಲ ಎಂದು ಬಿಟ್ಟುಕೊಡುತ್ತೇವೆ. ನಾನು ಒಂದು ವಿಷಯ ತೆಗೆದುಕೊಂಡು ಹೋದರೆ ಅದಕ್ಕೊಂದು ಹಿನ್ನೆಲೆ ಹೇಳಿ ಗಟ್ಟಿ ಮಾಡುತ್ತಾರೆ. ನಾನು ಇಂದು ಏನಾದ್ರೂ ಮಾಡಿದ್ದೇನೆ ಎಂದರೆ ಅದರಲ್ಲಿ ರಘು ಸರ್ ಅವರ ದೊಡ್ಡ ಪಾಲಿದೆ. ನಮ್ಮ ಬರವಣಿಗೆಗೆ ಕಲಾವಿದ ಜೀವ ತುಂಬಬೇಕು. ನನಗೆ ಅನಿಸುತ್ತದೆ ನಾವು ರಂಗಾಯಣ ರಘು ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೇನೋ ಅನಿಸುತ್ತೆ" ಎಂದರು.
ನಂತರ ನಟ ರಂಗಾಯಣ ರಘು ಮಾತನಾಡಿ, "ಜೀವನದಲ್ಲಿ ನನಗೆ ತುಂಬಾ ಅಮೂಲ್ಯ ನೆನಪು ಕೊಟ್ಟಂಥವರು ಸೂರಿ ಅವರು ಹಾಗೂ ಅಶ್ವಿನಿ ಮೇಡಂ. ನಾನು ಇಂಡಸ್ಟ್ರೀಗೆ ಬಂದು ಸುಮಾರು 35 ವರ್ಷವಾಯ್ತು. 1994 ರಿಂದ 2001ರವೆಗೆ ನಾನು ಮಾಡಿದ ಸಿನಿಮಾಗಳ ಬಗ್ಗೆ ಊರಲ್ಲೆಲ್ಲಾ ಹಾಗೆ ಹೀಗೆ ಎಂದೆಲ್ಲ ಹೇಳಿಕೊಂಡು ಬರುತ್ತಿದ್ದೆ. ರಂಗಾಯಣದ ಬಗ್ಗೆ ನಾನು ಎಷ್ಟು ನೆನಪು ಮಾಡಿಕೊಂಡರೆ ಕಡಿಮೆ. ನಾನು ಈವರೆಗೂ 350 ಸಿನಿಮಾಗಳಲ್ಲಿ ನಟಿಸಿದ್ದೇನೆ. ಅದರಲ್ಲೂ ಅಪ್ಪು ಅವರ ಋಣ ಜಾಸ್ತಿ ಇದೆ, ಮೇಡಂ ಬಂದಿರುವುದು ಅಷ್ಟೇ ಖುಷಿಯಾಗುತ್ತಿದೆ. ನಮಗೆ ದೊಡ್ಮನೆಯಿಂದ ದೊಡ್ಡ ಆಶೀರ್ವಾದ ಸಿಕ್ಕಿದೆ" ಎಂದು ಹೇಳಿದರು.