1987ರಲ್ಲಿ ಪ್ರಸಾರ ಕಂಡ ರಮಾನಂದ್ ಸಾಗರ್ ನಿರ್ದೇಶನದ ಪ್ರಸಿದ್ಧ 'ರಾಮಾಯಣ' ಕಥೆ ಮತ್ತೆ ಕಿರುತೆರೆಗೆ ಮರಳಲು ಸಜ್ಜಾಗಿದೆ. ಬಹುಕಾಲದಿಂದಲೂ ಈ ಧಾರಾವಾಹಿ ದೇಶದಲ್ಲಿ ಮನೆಮಾತಾಗಿ ಉಳಿದುಕೊಂಡಿದೆ. ಅಂದಿನ ಸಂದರ್ಭದಲ್ಲಿ ತೆರೆ ಮೇಲೆ ಕಾಣಿಸುತ್ತಿದ್ದ ರಾಮ, ಸೀತೆ ಪ್ರೇಕ್ಷಕರ ಪಾಲಿಗೆ ಅಕ್ಷರಶ: ದೇವರಾಗಿದ್ದರು. ಜನರು ಟಿವಿಯೆದುರು ಕುಳಿತು ಪೂಜೆ ಮಾಡಿರುವ ಅನೇಕ ಉದಾಹರಣೆಗಳೂ ಇವೆ. ಭಾರಿ ಪ್ರತಿಕ್ರಿಯೆ ಗಳಿಸಿದ್ದ 'ರಾಮಾಯಣ' ಭಾರತೀಯ ದೂರದರ್ಶನ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ಪೌರಾಣಿಕ ಕಥೆಗಳಲ್ಲಿ ಒಂದಾಗಿದೆ.
ಡಿಡಿ ನ್ಯಾಷನಲ್‌ನಲ್ಲಿ ಪ್ರಸಾರ: ಇದೀಗ 'ರಾಮಾಯಣ' ಧಾರವಾಹಿಯ ಮರುಪ್ರಸಾರವನ್ನು ದೂರದರ್ಶನ ವಾಹಿನಿ ಅಧಿಕೃತವಾಗಿ ಘೋಷಿಸಿದೆ. ಸಾಮಾಜಿಕ ಜಾಲತಾಣ 'ಎಕ್ಸ್' ಸೇರಿದಂತೆ ತಮ್ಮ ಅಧಿಕೃತ ಸೋಷಿಯಲ್ ಮಿಡಿಯಾ ಖಾತೆಗಳಲ್ಲೂ ಈ ವಿಚಾರವನ್ನು ಹಂಚಿಕೊಂಡಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿರುವ ಸಣ್ಣ ವಿಡಿಯೋ, ಕಾರ್ಯಕ್ರಮದ ಸಾರಾಂಶ ಒಳಗೊಂಡಿದೆ. ಇದು ಧರ್ಮ, ಪ್ರೀತಿ ಮತ್ತು ಸಮರ್ಪಣೆಯ ಸಾಟಿಯಿಲ್ಲದ ಸಾಹಸ ಎಂದು ವಾಹಿನಿ ವರ್ಣಿಸಿದೆ. ಡಿಡಿ ನ್ಯಾಶನಲ್ನಲ್ಲಿ ಶೀಘ್ರದಲ್ಲೇ 'ರಾಮಾಯಣ' ಮರುಪ್ರಸಾರ ಪ್ರಾರಂಭಿಸಲಿದೆ.
ಇತ್ತೀಚೆಗಷ್ಟೇ, ಭಗವಾನ್ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಐತಿಹಾಸಿಕ ಅದ್ಧೂರಿ ಸಮಾರಂಭಕ್ಕೆ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಸಾಕ್ಷಿಯಾಗಿದ್ದರು. ಈ ಕಾರ್ಯಕ್ರಮವನ್ನು ಬಹಳ ಸಂಭ್ರಮದಿಂದ ಆಚರಿಸಿದ್ದ ಇಡೀ ದೇಶ ಭಗವಾನ್ ಶ್ರೀರಾಮನ ಜಪ ಮಾಡುತ್ತಿದೆ. ಇಂಥ ಹೊತ್ತಿನಲ್ಲಿ ಪುರಾಣ ಪ್ರಸಿದ್ಧ 'ರಾಮಾಯಣ'ದ ಮರು ಪ್ರಸಾರವು ಇನ್ನೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪುವ ನಿರೀಕ್ಷೆ ಇದೆ. ವಾಹಿನಿಯು ಪ್ರಸಾರ ದಿನಾಂಕವನ್ನು ಸದ್ಯಕ್ಕೆ ಬಹಿರಂಗಪಡಿಸಿಲ್ಲ. ಆದರೆ ಶೀಘ್ರದಲ್ಲೇ ಮರುಪ್ರಸಾರವಾಗುವ ನಿರೀಕ್ಷೆ ಇದೆ.