ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಪ್ರೇಮಾಂಕುರವಾಗಿ, ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿ ಮಾದರಿ ದಾಂಪತ್ಯ ಜೀವನ ನಡೆಸುತ್ತಿರುವ ಹಲವು ಉದಾಹಣೆಗಳು ನಮ್ಮ ಕಣ್ಣ ಮುಂದಿವೆ. ಇದೀಗ ಈ ಸಾಲಿಗೆ ಸೇರಲು ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತು ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಸಜ್ಜಾಗಿದ್ದಾರೆ.
ಕೆಲ ಸಮಯದಿಂದ ಡೇಟಿಂಗ್ನಲ್ಲಿದ್ದ ಈ ಜೋಡಿ ಈಗ ಹಸೆಮಣೆ ಏರಲು ಸಜ್ಜಾಗಿದೆ. ಗೋವಾದಲ್ಲಿ ಪರಿಸರ ಸ್ನೇಹಿ ವಿವಾಹ ಆಚರಣೆಗಳು ನಡೆಯಲಿವೆ. ಈ ವಾರವಿಡೀ ಮುಂಬೈನಲ್ಲಿ ಸಮಾರಂಭಗಳು ಜರುಗಿದ್ದು, ಇನ್ನೂ ಗೋವಾದ ನಿಶ್ಚಿತ ಸ್ಥಳದಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಫೆಬ್ರವರಿ 19 ಅಂದರೆ ನಾಳೆಯಿಂದ ಪ್ರಾರಂಭವಾಗುವ ಮೂರು ದಿನಗಳ ವಿವಾಹ ಸಮಾರಂಭ ಫೆಬ್ರವರಿ 21ರಂದು ಮುಕ್ತಾಯಗೊಳ್ಳಲಿದೆ. ಇದೀಗ ವಧುವರರು ಗೋವಾ ತಲುಪಿದ್ದು, ಏರ್ಪೋರ್ಟ್ನಿಂದ ವಿಡಿಯೋಗಳು ವೈರಲ್ ಆಗಿವೆ.
ಈ ವಾರದ ಶುರುವಲ್ಲಿ ಈವೆಂಟ್ಗಳು ಆರಂಭವಾದವು. ಮುಂಬೈನಲ್ಲಿರುವ ಜಾಕಿ ಭಗ್ನಾನಿ ಅವರ ನಿವಾಸದಲ್ಲಿ ವಧು-ವರರ ಕುಟುಂಬಸ್ಥರು ಬಂದು ಸೇರಿದ್ದರು. ಮುಂಬೈನ ನಿವಾಸ ಅಲಂಕೃತಗೊಂಡ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಸದ್ದು ಮಾಡಿದವು. ಇದೀಗ ರಾಕುಲ್ ಮತ್ತು ಜಾಕಿ ತಮ್ಮ ಕುಟುಂಬಸ್ಥರೊಂದಿಗೆ ಗೋವಾ ತಲುಪಿದ್ದಾರೆ. ನಿನ್ನೆ ತಡರಾತ್ರಿ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.