ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತು ನಟ - ನಿರ್ಮಾಪಕ ಜಾಕಿ ಭಗ್ನಾನಿ ಇಂದು ಗೋವಾದಲ್ಲಿ ಹಸೆಮಣೆ ಏರಲಿದ್ದಾರೆ. ವಿವಾಹದ ಪ್ರಮುಖ ಶಾಸ್ತ್ರಕ್ಕೆ ಕ್ಷಣಗಣನೆ ಆರಂಭವಾಗಿದೆ. ಕುಟುಂಬಸ್ಥರು, ಸ್ನೇಹಿತರು, ಚಿತ್ರರಂಗದ ಕೆಲ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಫೋಟೋ - ವಿಡಿಯೋಗಳು ಹೊರ ಬೀಳಲಿದೆ.
ನಿನ್ನೆ ಮೆಹೆಂದಿ, ಅರಿಶಿನ ಶಾಸ್ತ್ರ ಮತ್ತು ಸಂಗೀತ ಸಮಾರಂಭ ನಡೆದಿದೆ. ಇಂದು ಮದುವೆಯ ಪ್ರಮುಖ ಘಟ್ಟ ತಲುಪಿದ್ದಾರೆ. ಈ ಜೋಡಿಗಳಿಗಿಂದು ಬಹಳಾನೇ ವಿಶೇಷ ದಿನ. ಪ್ರೇಮಪಕ್ಷಿಗಳು ತಮ್ಮ ಎರಡೂ ಕುಟುಂಬಗಳ ಸಂಸ್ಕೃತಿಗಳನ್ನು ಗೌರವಿಸೋ ಸಲುವಾಗಿ ಎರಡು ಬಗೆಯ ವಿವಾಹ ಸಮಾರಂಭಗಳನ್ನು ಆಯೋಜನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಕುಲ್ ಮತ್ತು ಜಾಕಿ ಅವರ ಮದುವೆಯು ಬೆಳಗ್ಗೆ 11:00ಕ್ಕೆ ಪ್ರಾರಂಭವಾಗಲಿದೆ ಎಂದು ಹೇಳಲಾಗಿತ್ತು. ಆ ಪ್ರಕಾರ ಈಗಾಗಲೇ ಶಾಸ್ತ್ರಗಳು ಆರಂಭಗೊಂಡಿವೆ. ಎರಡು ಪ್ರತ್ಯೇಕ ಸಮಾರಂಭಗಳನ್ನು ನಿಗದಿಪಡಿಸಲಾಗಿದೆ. ರಾಕುಲ್ ಅವರು ಬೆಳಗ್ಗೆ ಚೂಡಾ ಶಾಸ್ತ್ರದಲ್ಲಿ ಭಾಗಿ ಆಗಿದ್ದರು. 'ಐಟಿಸಿ ಗ್ರ್ಯಾಂಡ್ ಸೌತ್ ಗೋವಾ'ದಲ್ಲಿ ಮಧ್ಯಾಹ್ನ 3:30ರ ನಂತರ ಸಪ್ತಪದಿ ತುಳಿಯಲಿದ್ದಾರೆ. ಆನಂದ್ ಕರಾಜ್ ಮತ್ತು ಸಿಂಧಿ ಶೈಲಿಯ ಮದುವೆಯನ್ನು ಯೋಜಿಸಿದ್ದಾರೆ. ಶಾಸ್ತ್ರ - ಸಮಾರಂಭಗಳ ನಂತರ, ತಮ್ಮ ಎಲ್ಲ ಅತಿಥಿಗಳಿಗಾಗಿ ಪಾರ್ಟಿ ಸಹ ಆಯೋಜಿಸಿದ್ದಾರೆ.
ಮಂಗಳವಾರ ರಾತ್ರಿ ಸಂಗೀತ್ ನೈಟ್ ಈವೆಂಟ್ ನಡೆದಿದೆ. ಸಂಗೀತಕ್ಕೂ ಮುನ್ನ ಮೆಹಂದಿ ಸಮಾರಂಭ ಹೊಂದಿದ್ದರು. ಮ್ಯಾರೇಜ್ ಲೊಕೇಶನ್ನಿಂದ ಕೆಲ ಫೋಟೋ - ವಿಡಿಯೋಗಳು ವೈರಲ್ ಆಗಿವೆ. ಕಡಲತೀರದ ಹಿನ್ನೆಲೆಯಲ್ಲಿ, ಹೂವಿನಿಂದ ಅಲಂಕರಿಸಲ್ಪಟ್ಟ ಮದುವೆಯ ಮಂಟಪದ ಫೋಟೋಗಳು ಶೇರ್ ಆಗಿವೆ.