ಭಾರತೀಯ ಚಿತ್ರರಂಗದ ಹೆಸರಾಂತ ನಟ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಲಾಲ್ ಸಲಾಂ' ಇಂದು ಚಿತ್ರಮಂದಿರ ಪ್ರವೇಶಿಸಿದೆ. ರಜನಿಕಾಂತ್ ಪುತ್ರಿ ಐಶ್ವರ್ಯಾ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದ ಕಥೆ ಕೋಮು ಸೌಹಾರ್ದತೆ ಮತ್ತು ಕ್ರಿಕೆಟ್ ಸುತ್ತ ಸುತ್ತುತ್ತದೆ.
ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿ ನಟಿಸಿದರೆ, ರಜನಿ ಪ್ರಮುಖ ಪಾತ್ರ (ವಿಸ್ತೃತ ಅತಿಥಿ ಪಾತ್ರ) ನಿರ್ವಹಿಸಿದ್ದಾರೆ. ಧನ್ಯಾ ಬಾಲಕೃಷ್ಣನ್, ವಿವೇಕ್ ಪ್ರಸನ್ನ ಮತ್ತು ಕೆ.ಎಸ್.ರವಿ ಕುಮಾರ್ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. 2024ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದ 'ಲಾಲ್ ಸಲಾಂ' 2023ರಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಅಂತಿಮವಾಗಿ ಇದೀಗ ತೆರೆಗಪ್ಪಳಿಸಿದ್ದು, ಬಹುತೇಕ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ಜೈಲರ್ ಮೂಲಕ ವಿಶ್ವಾದ್ಯಂತ ಸದ್ದು ಮಾಡಿದ್ದ ರಜನಿಕಾಂತ್ ಅವರ 'ಲಾಲ್ ಸಲಾಂ'ನ ಬಾಕ್ಸ್ ಆಫೀಸ್ ಪ್ರಯಾಣ ಉತ್ತಮವಾಗಿರಲಿದೆ ಎಂದು ಸಿನಿಪಂಡಿತರು ಅಂದಾಜಿಸಿದ್ದಾರೆ. ಒರ್ಮ್ಯಾಕ್ಸ್ ಮೀಡಿಯಾ ಅಂದಾಜಿನಂತೆ, ತಮಿಳುನಾಡಿನಲ್ಲಿಯೇ ಸರಿಸುಮಾರು 5.1 ಕೋಟಿ ರೂ. ಗಳಿಸುವ ಸಾಧ್ಯತೆ ಇದೆ. ಆದ್ರೆ ಸಿನಿ ಇಂಡಸ್ಟ್ರಿಯ ಮತ್ತೊಂದು ಟ್ರ್ಯಾಕರ್ ಸ್ಯಾಕ್ನಿಲ್ಕ್ ಅಂದಾಜಿನ ಪ್ರಕಾರ, 'ಲಾಲ್ ಸಲಾಂ' ಭಾರತದಾದ್ಯಂತ ಸರಿಸುಮಾರು 4 ಕೋಟಿ ರೂ. ಗಳಿಸಲಿದೆಯಂತೆ. ಲಾಲ್ ಸಲಾಮ್ ತನ್ನ ಮೊದಲ ದಿನಕ್ಕೆ ಒಟ್ಟಾರೆ ಶೇ.24.25ರಷ್ಟು ಆಕ್ಯುಪೆನ್ಸಿ ಹೊಂದಿತ್ತು.