ಭಾರತೀಯ ಚಿತ್ರರಂಗದ ಹಿರಿಯ, ಹೆಸರಾಂತ ನಟ ಅಮಿತಾಭ್ ಬಚ್ಚನ್ ಅವರಿಂದು 82ನೇ ವರ್ಷ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 30 ವರ್ಷಗಳ ಬಳಿಕ ರಜನಿಕಾಂತ್ ಜೊತೆಗಿನ 'ವೆಟ್ಟೈಯನ್' ಚಿತ್ರ ಬಿಡುಗಡೆಯಾಗಿದ್ದು, ಹುಟ್ಟುಹಬ್ಬದ ಸಂಭ್ರಮ ದುಪ್ಪಟ್ಟಾಗಿದೆ. ಬಹುನಿರೀಕ್ಷಿತ ಸ್ಟಾರ್ ಕಾಂಬಿನೇಶನ್ ಗಲ್ಲಾಪೆಟ್ಟಿಗೆ ವ್ಯವಹಾರದಲ್ಲೂ ಯಶಸ್ವಿಯಾಗಿದೆ. ಇಬ್ಬರು ಪ್ರತಿಭಾವಂತ ಕಲಾವಿದರ ವರ್ಚಸ್ಸು ಇನ್ನೂ ದೇಶಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ ಎಂಬುದನ್ನು ಸಾಬೀತುಪಡಿಸಿದೆ.
ವೆಟ್ಟೈಯನ್ ಬಾಕ್ಸ್ ಆಫೀಸ್ ಕಲೆಕ್ಷನ್:ಟಿ.ಜೆ.ಜ್ಞಾನವೆಲ್ ನಿರ್ದೇಶನದ 'ವೆಟ್ಟೈಯನ್' ಉತ್ತಮ ಅಂಕಿಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಆರಂಭಿಸಿದೆ. ಸೌತ್ನ ಮತ್ತೋರ್ವ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (GOAT) ನಂತರ ಈ ವರ್ಷ ತಮಿಳು ಚಿತ್ರದಲ್ಲಿ ಅತ್ಯುತ್ತಮ ಅಂಕಿಅಂಶಗಳೊಂದಿಗೆ ಶುರುವಾದ ಎರಡನೇ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಅಕ್ಟೋಬರ್ 10ರಂದು ಬಿಡುಗಡೆಯಾದ ವೆಟ್ಟೈಯನ್ ಭಾರತದಾದ್ಯಂತ 30 ಕೋಟಿ ರೂಪಾಯಿ (Net Collection) ಗಳಿಸುವ ಮೂಲಕ ಯಶಸ್ಸಿನ ಹಾದಿ ಹಿಡಿದಿದೆ. ತಮಿಳುನಾಡಿನಿಂದಲೇ ಹೆಚ್ಚು ಹಣ ಗಳಿಕೆಯಾಗಿರುವುದು ಗಮನಾರ್ಹ ಸಂಗತಿ. 30 ಕೋಟಿ ರೂಪಾಯಿ ಪೈಕಿ 26 ಕೋಟಿ ರೂ. ಕೇವಲ ತಮಿಳು ಪ್ರದೇಶದಿಂದ ಬಂದಿದೆ.
ವಿವಿಧ ಭಾಷೆಗಳ ಕಲೆಕ್ಷನ್ ಮಾಹಿತಿ:
- ತಮಿಳು: 26.15 ಕೋಟಿ ರೂಪಾಯಿ.
- ತೆಲುಗು: 3.2 ಕೋಟಿ ರೂಪಾಯಿ.
- ಹಿಂದಿ: 0.6 ಕೋಟಿ ರೂಪಾಯಿ.
- ಕನ್ನಡ: 0.05 ಕೋಟಿ ರೂಪಾಯಿ.
- ಒಟ್ಟು: 30 ಕೋಟಿ ರೂಪಾಯಿ. (ಆರಂಭಿಕ ಅಂದಾಜುಗಳು-ಡಾಟಾ ಮೂಲ: ಸ್ಯಾಕ್ನಿಲ್ಕ್).
ತಮಿಳುನಾಡಿನಲ್ಲಿ ಚಿತ್ರದ ಪ್ರದರ್ಶನ ಉತ್ತಮವಾಗಿ ನಡೆದಿದೆ. ಆದ್ರೆ ತೆಲುಗಿನಲ್ಲಿ ಕೇವಲ 3 ಕೋಟಿ ರೂ. ಕಲೆಕ್ಷನ್ ಆಗಿದೆ. ಮತ್ತೊಂದೆಡೆ, ಒಟಿಟಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳಿಂದಾಗಿ ಹಿಂದಿ ಆವೃತ್ತಿಯು ರಾಷ್ಟ್ರೀಯ ಮಟ್ಟದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿಲ್ಲ. ಇದು ಒಟ್ಟಾರೆ ಬಾಕ್ಸ್ ಆಫೀಸ್ ಕಲೆಕ್ಷನ್ನನ್ನು ಮಿತಿಗೊಳಿಸಿರಬಹುದು.