ಬುದ್ಧಿವಂತ ಖ್ಯಾತಿಯ ಉಪೇಂದ್ರ ಸಾರಥ್ಯದ ಡಿಸ್ಟೋಪಿಯನ್ ಸೈನ್ಸ್ ಫಿಕ್ಷನ್ ಥ್ರಿಲ್ಲರ್ 'ಯುಐ' ಬಹುತೇಕ ಮೆಚ್ಚುಗೆಯನ್ನೇ ಸ್ವೀಕರಿಸಿದ್ದು, ಭಾರತೀಯ ಗಲ್ಲಾಪೆಟ್ಟಿಗೆಯಲ್ಲೂ ಧೂಳೆಬ್ಬಿಸಿದೆ. ಸಿನಿಮಾ ತನ್ನ ಮೊದಲ ದಿನ 6.75 ಕೋಟಿ ರೂಪಾಯಿ ಸಂಗ್ರಹಿಸಿಸೋ ಮೂಲಕ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದೆ. ಆರಂಭದಲ್ಲಿ ಬಂದ ಚಿತ್ರದ ವಿಶಿಷ್ಟ ಸಾಲುಗಳು ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿ, ಸೋಷಿಯಲ್ ಮೀಡಿಯಾದಲ್ಲಿ ಆಸಕ್ತಿ ಹುಟ್ಟುಹಾಕಿತಿ. ಈ ಮೂಲಕ ಚಿತ್ರ ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಂಡಿದೆ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, 'ಯುಐ' ರಾಜ್ಯದಲ್ಲಿ 6 ಕೋಟಿ ರೂಪಾಯಿ ಸಂಗ್ರಹಿಸಿದೆ. ತೆಲುಗು ಬಾಕ್ಸ್ ಆಫೀಸ್ನಿಂದ 70 ಲಕ್ಷ ರೂ., ತಮಿಳುನಾಡಿನಿಂದ 4 ಲಕ್ಷ ರೂ. ಮತ್ತು ಹಿಂದಿ ಪ್ರದೇಶಗಳಿಂದ 1 ಲಕ್ಷ ರೂಪಾಯಿಯ ವ್ಯವಹಾರ ನಡೆಸಿದೆ. ಸೋಷಿಯಲ್ ಮೀಡಿಯಾದಲ್ಲೀಗ ಉಪ್ಪಿ ಹವಾ ಜೋರಾಗಿದ್ದು, ವಾರಾಂತ್ಯ ಕಲೆಕ್ಷನ್ನ ಅಂಕಿ - ಅಂಶಗಳು ಇನ್ನಷ್ಟು ಏರಿಕೆ ಆಗುವ ಸಾಧ್ಯತೆಗಳಿವೆ. ಸಿನಿಮಾದ ಕನ್ನಡ ಆವೃತ್ತಿಯು ಉತ್ತಮ ಆಕ್ಯುಪೆನ್ಸಿ ರೇಟ್ ಹೊಂದಿತ್ತು. ಡಿಸೆಂಬರ್ 20, ಶುಕ್ರವಾರದಂದು ಒಟ್ಟಾರೆ ಆಕ್ಯುಪೆನ್ನಿ 72.44% ರಷ್ಟಿತ್ತು. ತೆಲುಗು ಆವೃತ್ತಿ ಒಟ್ಟಾರೆ ಶೇ.38.32ರಷ್ಟು ಆಕ್ಯುಪೆನ್ಸಿ ಹೊಂದಿತ್ತು.
ಮುಖ್ಯಭೂಮಿಕೆಯಲ್ಲಿ ನಟಿಸಿರುವ ಉಪೇಂದ್ರ ಅವರೇ ಸಿನಿಮಾದ ಕಥೆ ಬರೆದು ನಿರ್ದೇಶಿಸಿದ್ದಾರೆ. ರೀಷ್ಮಾ ನಾಣಯ್ಯ, ಮುರಳಿ ಶರ್ಮಾ, ಸನ್ನಿ ಲಿಯೋನ್, ಜಿಶು ಸೇನ್ಗುಪ್ತಾ, ನಿಧಿ ಸುಬ್ಬಯ್ಯ, ಸಾಧು ಕೋಕಿಲ, ಮುರಳಿ ಕೃಷ್ಣ ಮತ್ತು ಇಂದ್ರಜಿತ್ ಲಂಕೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Watch: ಅಮೆರಿಕ ತಲುಪಿದ ಶಿವರಾಜ್ಕುಮಾರ್, ಮಂಗಳವಾರ ಶಸ್ತ್ರಚಿಕಿತ್ಸೆ
ಬಿಡುಗಡೆ ಮೊದಲೇ ವಾರ್ನರ್ ಗ್ಲಿಂಪ್ಸ್ ಮತ್ತು ಟ್ರೋಲ್ ಸಾಂಗ್ ಮೂಲದ ಸದ್ದು ಮಾಡಿದ್ದ ಚಿತ್ರ ಇದೀಗ ಕುತೂಹಲಕಾರಿ ಮತ್ತು ವಿಶಿಷ್ಟ ಪ್ರೆಸೆಂಟೇಶನ್ ಮೂಲಕ ಪ್ರೇಕ್ಷಕರ ಗಮನವನ್ನು ತನ್ನತ್ತ ಸೆಳೆದುಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನ ರಿಯಾಕ್ಷನ್ನಿಂದ ಯುಐ ಸದ್ದು ಮಾಡಿದ್ದು, ಇಂದು ಮತ್ತು ನಾಳೆ ಕಲೆಕ್ಷನ್ ಏರುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಮಿಲನಾ, ಹರ್ಷಿಕಾ, ಪ್ರಣಿತಾ TO ಅನುಷ್ಕಾ ಕೊಹ್ಲಿ, ದೀಪಿಕಾ ಪಡುಕೋಣೆ: 2024ರಲ್ಲಿ ಪೋಷಕರಾದ ಸೆಲೆಬ್ರಿಟಿ ಕಪಲ್ಸ್
ಉಪೇಂದ್ರ ಅವರು ಕಳೆದ ದಿನ ಸಿನಿಮಾ ತೆರೆಕಂಡ ಬೆನ್ನಲ್ಲೇ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿ ವ್ಯಾಪಕವಾಗಿ ಗಮನ ಸೆಳೆದಿದ್ದರು. ''ಕಾತರದಿಂದ ಕಾಯುತ್ತಿದ್ದೇನೆ. U I ಚಿತ್ರದ ಎಷ್ಟು ಸೀನ್ಗಳನ್ನು ಡೀಕೋಡ್ ಮಾಡುತ್ತೀರಾ ಮತ್ತು ಕೊನೆಯ ಶಾಟ್ ಡಿಕೋಡ್ ಮಾಡಲು ಎಷ್ಟು ಸಮಯ ತೆಗೆದು ಕೊಳ್ಳುತ್ತೀರಾ ಎಂದು'' ಬರೆದುಕೊಂಡಿದ್ದರು. ಡಿಫ್ರೆಂಟ್ ಡೈರೆಕ್ಷನಲ್ ಸ್ಟೈಲ್ಗೆ ಹೆಸರುವಾಸಿಯಾಗಿರುವ ಉಪೇಂದ್ರ ಅವರ ಈ ಪೋಸ್ಟ್ ಸಖತ್ ಸದ್ದು ಮಾಡಿತ್ತು. ನಂತರ ಸಿನಿಮಾ ನೋಡಿದ ಹಲವರು ಕಥೆ ಅರ್ಥಮಾಡಿಕೊಳ್ಳೋದು ಒಂದೇ ಚಾಲೆಂಜ್ ಇದ್ದಂತೆ ಎಂಬಂತಹ ಅಭಿಪ್ರಾಯ ವ್ಯಕ್ತಪಡಿಸಿದ್ದರು.