ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಶಿವರಾಜ್ಕುಮಾರ್ ಬುಧವಾರ ಸಂಜೆ ಅಮೆರಿಕ ದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಕಳೆದ ರಾತ್ರಿ ಸಾಗರೋತ್ತರ ದೇಶವನ್ನು ತಲುಪಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿರುವುದು ನಿಮಗೆ ತಿಳಿದೇ ಇದೆ. ನಟಸಾರ್ವಭೌಮ ರಾಜ್ಕುಮಾರ್ ಪುತ್ರ ತಮ್ಮ ಅಮೋಘ ಅಭಿನಯ, ಸಿನಿಮಾ ಮೇಲಿನ ಒಲವು, ಅಭಿಮಾನಿಗಳೊಂದಿಗಿನ ಒಡನಾಟದಿಂದಾಗಿ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಸೂಪರ್ ಸ್ಟಾರ್ಡಮ್ ಗಿಟ್ಟಿಸಿಕೊಂಡಿರುವ ತಾರೆ ತಮ್ಮೆಲ್ಲಾ ಬದ್ಧತೆಗಳನ್ನು ಪೂರ್ಣಗೊಳಿಸಿ, ವಿದೇಶಕ್ಕೆ ತೆರಳಿದ್ದಾರೆ.
ಫ್ಲೋರಿಡಾದಲ್ಲಿರುವ ಮಿಯಾಮಿಯಲ್ಲಿ ಡಿಸೆಂಬರ್ 24ರ ಮಂಗಳವಾರದಂದು ಶಿವಣ್ಣನಿಗೆ ಸರ್ಜರಿ ನಡೆಯಲಿದೆ. ಸೂಕ್ತ ಚಿಕಿತ್ಸೆ ಪಡೆದು ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಜನವರಿ 25ರಂದು ಅಲ್ಲಿಂದ ಹೊರಟು 26ಕ್ಕೆ ವಾಪಸಾಗಲಿದ್ದಾರೆ.
ಶಿವರಾಜ್ಕುಮಾರ್ ಯುಎಸ್ ಪ್ರಯಾಣ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಬುಧವಾರದಂದು ಭೇಟಿ ಕೊಟ್ಟು ಗುಣಮಟ್ಟದ ಸಮಯ ಕಳೆದಿದ್ದರು. ಸಿನಿಮಾ, ರಾಜಕೀಯ ಗಣ್ಯರು ಒಂದೇ ಸೂರಿನಡಿ ಸೇರಿ ಉಭಯ ಕುಶಲೋಪರಿ ವಿಚಾರಿಸಿಕೊಂಡಿದ್ದರು. ನಟ ಕಿಚ್ಚ ಸುದೀಪ್, ಮಾಜಿ ಸಚಿವ ಬಿ.ಸಿ.ಪಾಟೀಲ್, ಸಚಿವ ಮಧು ಬಂಗಾರಪ್ಪ ಸೇರಿದಂತೆ ಹಲವು ಗಣ್ಯರಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಅದರಲ್ಲೂ ಕಿಚ್ಚ ಸುದೀಪ್ ಭಾವುಕರಾದ ಕ್ಷಣ, ಶಿವಣ್ಣನನ್ನು ಅಪ್ಪಿಕೊಂಡಿದ್ದ ಫೋಟೋ ಕಂಡ ಅಭಿಮಾನಿಗಳು ಮರುಗಿದ್ದರು.
ಇದನ್ನೂ ಓದಿ: 'ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ, ಜ.26ರಂದು ಸಿಗೋಣ': ಶಿವರಾಜ್ಕುಮಾರ್
ಏರ್ಪೋರ್ಟ್ ತಲುಪುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ್ದ ಶಿವಣ್ಣ, ''ಯಾರೂ ಭಯ ಪಡಬೇಡಿ. ಪ್ಯಾರಾಮೀಟರ್ಸ್ ಎಲ್ಲವೂ ಉತ್ತಮವಾಗಿದೆ. ಚೆಕ್ ಅಪ್ಗಳು ನಡೆದಿದ್ದು, ಎವ್ರಿಂಥಿಗ್ ಈಸ್ ಗುಡ್. ಮನೆಯಿಂದ ಹೊರಡುತ್ತಿರುವ ಹಿನ್ನೆಲೆ ನಮ್ಮವರನ್ನು ನೋಡಿದಾಗ ಸ್ವಲ್ಪ ಭಾವುಕರಾದೆವು. ಸಂಬಂಧಿಕರು, ಅಭಿಮಾನಿಳು ಇದ್ದಾರೆ. ಹಾಗಾಗಿ ಸ್ವಲ್ಪ ದುಃಖ ಅಷ್ಟೇ, ಇನ್ನೇನಿಲ್ಲ. ಅದರ್ವೈಸ್, ಐ ಆ್ಯಮ್ ವೆರಿ ಕಾನ್ಫಿಡೆಂಟ್. 24ರಂದು ಸರ್ಜರಿ ನಡೆಯಲಿದೆ. ಆ ಬಗ್ಗೆಯೂ ಎಲ್ಲವೂ ಪಾಸಿಟಿವ್ ಆಗಿದೆ. ಅದರ ಬಗ್ಗೆ ಯೋಚನೆಯೇನಿಲ್ಲ. ವೈದ್ಯರು ಬಹಳ ಪಾಸಿಟಿವ್ ಆಗಿ ಮಾತನಾಡಿದ್ದಾರೆ'' ಎಂದು ತಿಳಿಸಿದರು.
ಇದನ್ನೂ ಓದಿ: ಶಿವಣ್ಣನನ್ನು ತಬ್ಬಿ ಸುದೀಪ್ ಭಾವುಕ: ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುತ್ತಿರುವ ಶಿವರಾಜ್ಕುಮಾರ್ ನಿವಾಸದಲ್ಲಿ ಗಣ್ಯರು
ಮಾತು ಮುಂದುವರಿಸಿ, "ಅಭಿಮಾನಿಗಳ ಪ್ರೀತಿ, ಹಾರೈಕೆ ಇದೆ. ಜೊತೆಗೆ ಮಾಧ್ಯಮದ ಬೆಂಬಲವೂ ಇದೆ. ಯಾರೂ ಗ್ಲೋರಿಫೈ ಮಾಡಿಲ್ಲ. ಅದು ಖುಷಿ ಕೊಟ್ಟಿದೆ. ಅಷ್ಟೊಂದು ಪ್ರೀತಿ, ಗೌರವ ನನ್ನ ಮೇಲಿರೋದು ಆಶೀರ್ವಾದ. ಮಂಗಳವಾರ ಸರ್ಜರಿ ಇದೆ. ಸಂಪೂರ್ಣ ಚಿಕಿತ್ಸೆ ಜನವರಿ 26ಕ್ಕೆ ಇಲ್ಲಿರುತ್ತೇನೆ" ಎಂದು ಮಾಹಿತಿ ಹಂಚಿಕೊಂಡಿದ್ದರು.