ಕನ್ನಡದ ಖ್ಯಾತ ನಿರ್ದೇಶಕ ಆರ್.ಚಂದ್ರು ಅವರು ಉತ್ತರಪ್ರದೇಶದ ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಡುತ್ತಿದ್ದಾರೆ. ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ನಲ್ಲಿ ಧಾರ್ಮಿಕ ಪ್ರವಾಸದ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದು, ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇಂದು ಹಿಂದೂ ಧರ್ಮದ ಅತ್ಯಂತ ನಂಬಿಕೆಯ ಕ್ಷೇತ್ರವಾಗಿರೋ ಕಾಶಿಗೆ ಭೇಟಿ ಕೊಟ್ಟಿದ್ದಾರೆ. ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿರುವ ಫೋಟೋ ಹಂಚಿಕೊಂಡಿರುವ ನಿರ್ದೇಶಕರು, ''ಮುಂಜಾನೆ ವಾರಣಾಸಿಯ ಕಾಶಿ ವಿಶ್ವನಾಥನ ಸನ್ನಿಧಾನದಲ್ಲಿ. ಹರ ಹರ ಮಹಾದೇವ್'' ಎಂದು ಬರೆದುಕೊಂಡಿದ್ದಾರೆ. ಬ್ಲ್ಯಾಕ್ ಶರ್ಟ್, ಕೇಸರಿ ಬಣ್ಣದ ಲುಂಗಿ, ಶಾಲ್ ಧರಿಸಿದ ನಿರ್ದೇಶಕರ ಹಣೆಯಲ್ಲಿ ಹರಿಶಿಣ, ಕುಂಕುಮ ಕಾಣಬಹುದು.
ಕಳೆದ ದಿನ ತಮ್ಮ ಸಿಂಗಲ್ ಫೋಟೋಗಳನ್ನು ಹಂಚಿಕೊಂಡು, ''ವಾರಣಾಸಿಯ ಪವಿತ್ರ ಗಂಗಾ ನದಿ ತೀರದಲ್ಲಿ'' ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಫೋಟೋಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.
ಮಹಾ ಕುಂಭಮೇಳದಲ್ಲಿ ಮಿಂದೆದ್ದ ಕ್ಷಣ : ಕಳೆದ ದಿನ ಹಂಚಿಕೊಂಡಿರುವ ಪೋಸ್ಟ್ ಮಹಾ ಕುಂಭಮೇಳಕ್ಕೆ ಸಂಬಂಧಿಸಿದ್ದು. ಪುಣ್ಯ ಸ್ನಾನ ಮಾಡಿರುವ ನಿರ್ದೇಶಕರು, ಫೋಟೋಗಳನ್ನು ಶೇರ್ ಮಾಡಿ ಸುದೀರ್ಘ ಬರಹ ಹಂಚಿಕೊಂಡಿದ್ದಾರೆ.
ಬರಹದಲ್ಲೇನಿದೆ?
''ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ತ್ರಿವೇಣಿ ಸಂಗಮದ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ಮಹಾಕ್ಷಣ. ಬದುಕು ಸಾರ್ಥಕ ಭಾವ''.
''ಪ್ರತಿಯೊಬ್ಬರ ನಂಬಿಕೆ ಅಂದರೆ ಅದು ಅಪಾರವಾದ ದೈವ ಭಕ್ತಿ. ಯಾಕೆಂದರೆ ಆ ದೈವ ಶಕ್ತಿಯೇ ಅಂಥದ್ದು. ನಮ್ಮದು ಭಕ್ತಿ ಪ್ರಧಾನ ದೇಶ. ಈಗ ಇಡೀ ವಿಶ್ವವೇ ಒಂದೊಮ್ಮೆ ತಿರುಗಿ ನೋಡುವಂತಹ ಮಹಾ ಕುಂಭಮೇಳ ದೇಶದಲ್ಲಿ ನಡೆಯುತ್ತಿದೆ''.
''ಪ್ರಯಾಗ್ ರಾಜ್ನಲ್ಲಿ 144 ವರ್ಷಗಳ ಬಳಿಕ ನಡೆಯುತ್ತಿರುವ ಈ ಮಹಾಕುಂಭ ಮೇಳವನ್ನು ಕಣ್ತುಂಬಿಕೊಳ್ಳುತ್ತಿರುವ ಭಕ್ತರಿಗೆ ಪಾರವೇ ಇಲ್ಲ. ನಿತ್ಯವೂ ಇಲ್ಲಿ ಧರ್ಮ ಜಾತ್ರೆಯ ಸಡಗರ. ಇಲ್ಲಿ ಮಿಂದೇಳುವ ಭಕ್ತರಿಗಂತೂ ಪಾರವೇ ಇಲ್ಲ''.
''ಇಂತಹ ಅಪರೂಪದ ಧಾರ್ಮಿಕ ಮೇಳವನ್ನು ಹತ್ತಿರದಿಂದ ನೋಡಿ ಶಾಂತವಾಗಿ ಹರಿಯುವ ನದಿಯಲ್ಲಿ ಪುಣ್ಯಸ್ನಾನ ಮಾಡಿ ಮಹಾ ಮಂಗಳಾರತಿ ಪಡೆದು ಕೈ ಮುಗಿದ ಕ್ಷಣ ನಿಜಕ್ಕೂ ಧನ್ಯತಾ ಭಾವ. ನಿತ್ಯವೂ ಧ್ಯಾನಿಸುವ ಮನಸ್ಸು, ಇಷ್ಟೊಂದು ದೈವ ಮನಸ್ಸುಗಳ ಜೊತೆಯಲ್ಲಿ ಅಪರೂಪದ ಮೇಳದಲ್ಲಿ ಭಕ್ತಿಪೂರ್ವಕವಾಗಿ ಭಾಗಿ ಆಗೋದು ಕೂಡ ಖುಷಿಯ ಕ್ಷಣ''.
ಇದನ್ನೂ ಓದಿ: ತಂದೆ ನಿರ್ಮಾಪಕನಾದ್ರೂ ಸ್ವಪ್ರಯತ್ನದಲ್ಲೇ ಸಾಧನೆ : 500ರೂ.ಗೆ ಕೆಲಸ ಮಾಡಿದ್ದ ನಟ ಕನ್ನಡದ ಸೂಪರ್ ಸ್ಟಾರ್
''ಸಿನಿಮಾ ಚಿತ್ರೀಕರಣಕ್ಕಾಗಿಯೇ ಲೊಕೇಷನ್ ಹುಡುಕಾಟಕ್ಕೆ ಬಂದ ನಾನು ಈ ಅಪರೂಪದ ಘಳಿಗೆಗೆ ಸಾಕ್ಷಿ ಆಗಿದ್ದೇನೆ ಎಂಬ ಸಂತಸ. ಮಹಾ ನಾಗಾ ಸಾಧುಗಳು, ಮಹಾ ತಪಸ್ವಿಗಳು, ಋಷಿಮುನಿಗಳು, ಅಘೋರಿಗಳು, ಸಾಧು-ಸಂತರನ್ನು ಹತ್ತಿರದಿಂದ ನೋಡಿ ಆಶೀರ್ವಾದ ಪಡೆದ ತೃಪ್ತಿ. ಜೊತೆಗೆ, ಈ ಮಹಾ ಧಾರ್ಮಿಕ ಸಮ್ಮೇಳನ ಹಿನ್ನೆಲೆಯಲ್ಲಿ ಈ ಮಣ್ಣನ್ನು ಸ್ಪರ್ಶಿಸಿದ ಶಿವನ ಆರಾಧಕರ ಆಚಾರ ವಿಚಾರವಂತೂ ಅನನ್ಯ. ಅವರೆಲ್ಲರನ್ನೂ ನೋಡಿ ಮನಸ್ಸು ಭಾವುಕವೆನಿಸಿದ್ದು ಸುಳ್ಳಲ್ಲ''.
ಇದನ್ನೂ ಓದಿ: ಸನ್ಯಾಸತ್ವ ಸ್ವೀಕರಿಸಿದ್ದ ನಟಿ ಮಮತಾ ಕುಲಕರ್ಣಿ ಕಿನ್ನರ ಅಖಾಡದಿಂದ ವಜಾ
''ಸದ್ಯ ಕೋಟ್ಯಂತರ ಭಕ್ತರು ಈ ಕುಂಭಮೇಳದಲ್ಲಿ ಪಾಲ್ಗೊಂಡು ಧನ್ಯರೆನಿಸಿದ್ದಾರೆ. ನನಗೂ ಕೂಡ ಅದೇ ಭಾವ. ಅಯೋಧ್ಯೆಗೂ ಭೇಟಿ ನೀಡಿ, ಕುಂಭಮೇಳವನ್ನು ಕಣ್ತುಂಬಿಕೊಂಡು ನಂತರ ವಾರಣಾಸಿಗೆ ಭೇಟಿ ಕೊಟ್ಟ ಅತ್ಯಂತ ಸಂತಸದ ಕ್ಷಣವದು. ನಿಜಕ್ಕೂ ಒಂದು ರೀತಿ ಈ ಬದುಕು ಸಾರ್ಥಕ ಭಾವ'' ಎಂದು ಬರೆದುಕೊಂಡಿದ್ದಾರೆ.
ಸರಯು ತೀರದಲ್ಲಿ ಆರತಿ : ಇನ್ನೂ ಆರತಿ ಫೋಟೋ ವಿಡಿಯೋ ಹಂಚಿಕೊಂಡು, 'ಅಯೋಧ್ಯೆಯ ಪವಿತ್ರ ನದಿ ಸರಯು ತೀರದಲ್ಲಿ ಆರತಿ ಮಾಡಿದ ಕ್ಷಣಗಳು' ಎಂದು ಬರೆದುಕೊಂಡಿದ್ದಾರೆ.
ಬಾಲ ರಾಮಲಲ್ಲಾನ ದರ್ಶನ : ಇದಕ್ಕೂ ಮುನ್ನ ಶೇರ್ ಆದ ಪೋಸ್ಟ್ನಲ್ಲಿ, 'ರಾಮ ಜನ್ಮಭೂಮಿಯಲ್ಲಿ ಬಾಲ ರಾಮಲಲ್ಲಾನ ದರ್ಶನ ಪಡೆದ ಸಾರ್ಥಕ ಕ್ಷಣಗಳು' ಎಂದು ಪೋಸ್ಟ್ ಹಾಕಿದ್ದಾರೆ.
ಆದರ್ಶ ಪುರುಷನ ಜನ್ಮಭೂಮಿಗೆ : ಎರಡು ದಿನದ ಹಿಂದಿನ ಪೋಸ್ಟ್ನಲ್ಲಿ, 'ಆದರ್ಶ ಪುರುಷ ಶ್ರೀ ರಾಮ ಜನ್ಮಭೂಮಿಗೆ ನನ್ನ ಮೊದಲ ಭೇಟಿ. ಜೈ ಶ್ರೀರಾಮ್' ಎಂದು ಬರೆದಿದ್ದಾರೆ.