ನವದೆಹಲಿ: ದೆಹಲಿಯ ಎಎಪಿ ನೇತೃತ್ವದ ಸರ್ಕಾರದ ಮಾಡೆಲ್ ಫೇಲ್ ಆಗಿದ್ದು, ಜನರು ಎಲ್ಲರನ್ನು ಒಳಗೊಂಡ ಬೆಳವಣಿಗೆಗೆ ಕಾರಣವಾಗುವ ಪಕ್ಷಕ್ಕೆ ಮತ ಹಾಕಲಿದ್ದಾರೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದರು.
ದೆಹಲಿ ವಿಧಾನಸಭಾ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿದ್ದು, ಬಿರುಸಿನ ಮತ ಪ್ರಚಾರ ಮೂರು ಪ್ರಮುಖ ಪಕ್ಷಗಳಿಂದ ಸಾಗಿದೆ. ಈ ನಡುವೆ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ನಾಯ್ಡು, ದೆಹಲಿಯ ಹವಾಮಾನ ಮತ್ತು ರಾಜಕೀಯ ಮಾಲಿನ್ಯದಿಂದ ಜನರು ದೆಹಲಿಯಲ್ಲಿ ವಾಸಿಸಲು ಹೆದರುತ್ತಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಅಭಿವೃದ್ಧಿ ಇಲ್ಲದಂತೆ ಆಗಿದೆ ಎಂದರು.
ರಾಜಕಾರಣಿಗಳು ಯಾಗಾಗಲೂ ಇಂದು, ನಾಳೆ ಮತ್ತು ಭವಿಷ್ಯದ ಬಗ್ಗೆ ಚಿಂತಿಸಬೇಕಿದೆ. ಸರ್ಕಾರ ಉತ್ತಮ ಸಾರ್ವಜನಿಕ ನೀತಿಯಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೆಹಲಿ ಅರ್ಧ ಎಂಜಿನ್ ಸರ್ಕಾರ ಹೊಂದಿದ್ದು, ಅಭಿವೃದ್ಧಿ ಸಾಧಿಸಲು ಡಬಲ್ ಎಂಜಿನ್ ಸರ್ಕಾರ ಬೇಕು. ಕಾರ್ಯಕ್ಷಮತೆ ಮತ್ತು ಉತ್ತಮ ಜೀವನ ಮಟ್ಟಗಳು ಪ್ರಸ್ತುತವಾಗುತ್ತಿದ್ದು, ಸಿದ್ಧಾಂತವಲ್ಲ ಎಂದು ಟಿಡಿಪಿ ಮುಖ್ಯಸ್ಥ ನಾಯ್ಡು ಹೇಳಿದರು.
ಕೇಂದ್ರದ ಎನ್ಡಿಎ ಸರ್ಕಾರದ ಮೈತ್ರಿ ಪಕ್ಷವಾಗಿರುವ ಟಿಡಿಪಿ, ಬಿಜೆಪಿ ಪರ ಬ್ಯಾಟಿಂಗ್ ನಡೆಸಿದ್ದು, ದೆಹಲಿ ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರ ಅವಶ್ಯಕ ಎಂದು ಒತ್ತಿ ಹೇಳಿದರು. 2025 ಬಜೆಟ್ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ನಾಯ್ಡು, 2047ರ ಹೊತ್ತಿಗೆ ವಿಕಸಿತ್ ಭಾರತ ಗುರಿ ಸಾಧನೆಯನ್ನು ಬಜೆಟ್ ಹೊಂದಿದೆ ಎಂದು ಬಣ್ಣಿಸಿದರು.
ನಾವು ಅವರೊಂದಿಗೆ ಒಪ್ಪಂದವನ್ನು ಹೊಂದಿದ್ದು, ಖುಷಿಯಾಗಿದ್ದೇವೆ. ಇದು ನಮ್ಮ ಬೆಳವಣಿಗೆ ತತ್ವದೊಂದಿಗೆ ಶೇ 10ರಷ್ಟು ಸಂಯೋಜಿಸಿದೆ ಎಂದು ತಿಳಿಸಿದರು.
ಫೆ. 5 ರಂದು ಮತದಾನ ನಡೆಯಲಿದ್ದು, ಫೆ. 8 ರಂದು ರಾಷ್ಟ್ರ ರಾಜಧಾನಿಯ ಜನರು ಈ ಬಾರಿ ಯಾರಿಗೆ ಅಧಿಕಾರ ಗದ್ದುಗೆ ನೀಡಲಿದ್ದಾರೆ ಅನ್ನೋದು ಗೊತ್ತಾಗಲಿದೆ.
ಇದನ್ನೂ ಓದಿ: ದೆಹಲಿ ವಿಧಾನಸಭಾ ಚುನಾವಣಾ ಬಹಿರಂಗ ಪ್ರಚಾರ ಇಂದು ಅಂತ್ಯ; ಬುಧವಾರ ವೋಟಿಂಗ್ - ಯಾರತ್ತ ಮತದಾರನ ಒಲವು?