ಜಿಟಿ ಜಿಟಿ ಮಳೆ, ಬಿಸಿ ಬಿಸಿ ಚಾಯ್, ಜೊತೆಗೊಂದಿಗಿಷ್ಟು ಗರಂ ಮಿರ್ಚಿ. ವಾಹ್! ಇದರ ಮಜಾನೇ ಬೇರೆ. ಮಳೆ ತರುವ ಆಹ್ಲಾದ ವಾತಾವರಣಕ್ಕೆ ಅನುಗುಣವಾಗಿ ಮನೆಯೊಳಗಿನ ಟಿವಿಯಲ್ಲಿ ಮನಸ್ಸಿಗೆ ಖುಷಿ ಕೊಡುವ ಸಿನಿಮಾಗಳೂ ಬರುತ್ತಿದ್ದರೆ?. ಹೌದು. ಈ ಮಾನ್ಸೂನ್ ಸೀಸನ್‌ನಲ್ಲಿ ಕನ್ನಡ ಚಲನಚಿತ್ರಗಳೊಂದಿಗೆ ದಕ್ಷಿಣ ಭಾರತದ ದಿ ಬೆಸ್ಟ್ ಅನ್ನಿಸುವ ಸಿನಿಮಾಗಳು ನಿಮ್ಮನ್ನು ಉತ್ತಮ ಮೂಡ್‌ಗೆ ಕರೆದೊಯ್ಯಬಹುದು. ಅಂಥ ಸುಮಧುರ ಸಿನಿಮಾಗಳ ಸಣ್ಣದೊಂದು ಪಟ್ಟಿ ಇಲ್ಲಿದೆ ನೋಡಿ.
ಮುಂಗಾರು ಮಳೆ (ಡಿಸ್ನಿ+ ಹಾಟ್‌ಸ್ಟಾರ್):2006ರ ಡಿಸೆಂಬರ್ ಕೊನೆ ವಾರದಲ್ಲಿ ಗಣೇಶ್ ಅಭಿನಯದ 'ಮುಂಗಾರು ಮಳೆ' ಸಿನಿಮಾ ರಾಜ್ಯಾದ್ಯಂತ ತೆರೆಕಂಡಿತ್ತು. ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರ ಸಂಪೂರ್ಣ ಹೊಸತನದಿಂದ ಕೂಡಿತ್ತು. ಹಾಗಾಗಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಪೂಜಾ ಗಾಂಧಿ ಸ್ಯಾಂಡಲ್‌ವುಡ್‌ಗೆ ಪರಿಚಿತರಾದರು. ಇಬ್ಬರ ಜೋಡಿ ಜನರಿಗಿಷ್ಟವಾಯಿತು. ಎಷ್ಟು ಬಾರಿ ನೋಡಿದರೂ ಬೇಸರ ತರಿಸಿದ ಸಿನಿಮಾ ಮುಂಗಾರು ಮಳೆಯೆಂದು ಜನಜನಿತವಾಯಿತು.
ದೃಶ್ಯ- ಫಸ್ಟ್ ಆ್ಯಂಡ್ ಸೆಕೆಂಡ್ ಪಾರ್ಟ್ (ಜೀ5): ರವಿಚಂದ್ರನ್ ನಟನೆಯ 'ದೃಶ್ಯ' 2014ರಲ್ಲಿ ಬಿಡುಗಡೆಯಾಗಿ ಮೋಡಿ ಮಾಡಿತು. ಒಂದು ಮರ್ಡರ್ ಮಿಸ್ಟರಿ ಕಥೆಯನ್ನು ಅಚ್ಚುಕಟ್ಟಾಗಿ ತೆರೆಗೆ ತಂದವರು ನಿರ್ದೇಶಕ ಪಿ.ವಾಸು. ರವಿಚಂದ್ರನ್, ನವ್ಯಾ ನಾಯರ್, ಆರೋಹಿ ನಾರಾಯಣ್ ಮುಂತಾದವರಿದ್ದ ಈ ಸಿನಿಮಾದ ಕ್ಲೈಮ್ಯಾಕ್ಸ್‌ಗೆ ಪ್ರೇಕ್ಷಕರು ಅಚ್ಚರಿಗೊಂಡಿದ್ದರು. ಚಿತ್ರದ 2ನೇ ಪಾರ್ಟ್ ಸಹ ರಿಲೀಸ್ ಆಗಿದ್ದು, 'ದೃಶ್ಯ 2' ಸಿನಿಮಾದಲ್ಲೂ ಅದೇ ಪಾತ್ರಧಾರಿಗಳು ಮುಂದುವರಿದರು. ಈ ಸಿನಿಮಾದ ಕ್ಲೈಮ್ಯಾಕ್ಸ್ ಇನ್ನಷ್ಟು ಥ್ರಿಲ್ ನೀಡುತ್ತದೆ. ಇದೂ ಸಹ ಮಳೆಗಾಲದಲ್ಲಿ ನೋಡುವ ಒಂದು ಥ್ರಿಲ್ಲರ್.
ತಾಜ್ ಮಹಲ್ (ಸನ್ NXT):ಇದರಲ್ಲಿ ಅಜಯ್ ರಾವ್ ನಾಯಕನಾಗಿ, ಪೂಜಾ ಗಾಂಧಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಆರ್.ಚಂದ್ರು ನಿರ್ದೇಶನ ಮತ್ತು ಜಿ.ಅಭಿಮಾನ್ ರಾಯ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಹಳ್ಳಿಯಿಂದ ಉನ್ನತ ವ್ಯಾಸಂಗಕ್ಕಾಗಿ ಪಟ್ಟಣಕ್ಕೆ ಬಂದ ಬಡ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಪ್ರೀತಿಯಲ್ಲಿ ಬೀಳುತ್ತಾನೆ. ಹೀಗೆ ಪ್ರೀತಿಯಲ್ಲಿ ಸಿಲುಕಿ ಪ್ರೀತಿ ಮತ್ತು ಶಿಕ್ಷಣ ಎರಡರಲ್ಲೂ ವಿಫಲವಾಗಿ ತನ್ನ ಹಳ್ಳಿಗೆ ಮರಳುವಾಗ ಅಪಘಾತಕ್ಕೀಡಾಗಿ ನಿಧನವಾಗುತ್ತಾನೆ. ಮುಂದೇನಾಗುತ್ತೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು.
ಹ್ಯಾಪಿ ಡೇಸ್ (ಅಮೆಜಾನ್ ಪ್ರೈಮ್ ವಿಡಿಯೋ): 'ಹ್ಯಾಪಿ ಡೇಸ್' ಸಿನಿಮಾವನ್ನು ಶೇಖರ್ ಕಮ್ಮುಲ ನಿರ್ದೇಶಿಸಿದ್ದಾರೆ. 8 ಜನ ಸ್ನೇಹಿತರ ನಡುವಿನ ದೃಶ್ಯಗಳು, ಯಾವುದೋ ಒಂದು ವಿಷಯದೊಂದಿಗೆ ಕನೆಕ್ಟ್ ಆಗುವ ಸನ್ನಿವೇಶಗಳು ಪ್ರೇಕ್ಷಕರನ್ನು ತಮ್ಮ ಕಾಲೇಜು ದಿನಗಳಿಗೆ ಮರಳಿಸಬಲ್ಲದು.