ಮೈಸೂರು : ಇಲ್ಲಿನ ಹೆಚ್. ಡಿ ಕೋಟೆ ತಾಲೂಕಿನ ರಾಜೇಗೌಡನ ಹುಂಡಿ ಗ್ರಾಮದಲ್ಲಿನ ಚರಂಡಿಯಲ್ಲಿ ನವಜಾತ ಶಿಶುವೊಂದು ಇಂದು ಪತ್ತೆಯಾಗಿದೆ. ಇದೀಗ ಮಗುವನ್ನ ರಕ್ಷಣೆ ಮಾಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಬೆಳಗ್ಗೆ ಗ್ರಾಮಸ್ಥರು ತಮ್ಮ ಹೊಲಗಳಿಗೆ ಹೋಗುವ ಸಂದರ್ಭದಲ್ಲಿ ಚರಂಡಿಯಿಂದ ಮಗುವೊಂದು ಅಳುವ ಶಬ್ಧ ಕೇಳಿಸಿದೆ. ಕೂಡಲೇ ಗ್ರಾಮಸ್ಥರು ಸ್ಥಳೀಯ ಆಶಾ ಕಾರ್ಯಕರ್ತರಿಗೆ ಈ ವಿಚಾರ ತಿಳಿಸಿದ್ದಾರೆ. ತಕ್ಷಣ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸ್ಥಳಕ್ಕೆ ಬಂದು ಮಗುವನ್ನ ಹೆಚ್. ಡಿ ಕೋಟೆ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಈ ವಿಚಾರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹೆಚ್. ಡಿ ಕೋಟೆ ತಾಲೂಕು ಹಾಗೂ ಆರೋಗ್ಯ ತಾಲೂಕಾಧಿಕಾರಿಗಳಿಗೆ ತಿಳಿಸಿದ್ದು, ಶಿಶುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಚೆಲುವಾಂಬ ಮಕ್ಕಳ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಹೆಚ್. ಡಿ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆಯ ಬಗ್ಗೆ ಹೆಚ್. ಡಿ ಕೋಟೆ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ದೀಪಾ ಈಟಿವಿ ಭಾರತದೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಇಂದು ಬೆಳಗ್ಗೆ ನವಜಾತ ಶಿಶುವೊಂದು ಜೀವಂತ ಸ್ಥಿತಿಯಲ್ಲಿ ಹೆಚ್ ಡಿ ಕೋಟೆ ತಾಲೂಕಿನ ರಾಜೇಗೌಡನ ಹುಂಡಿ ಗ್ರಾಮದ ಬಳಿ ಚರಂಡಿಯಲ್ಲಿ ಪತ್ತೆಯಾಗಿದೆ. ಆ ಮಗುವಿಗೆ ಹೆಚ್. ಡಿ ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಚೆಲುವಾಂಬ ಮಕ್ಕಳ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿ ಮಗುವನ್ನ ಜಿಲ್ಲಾ ಮಕ್ಕಳ ಸಮಿತಿ ಮುಂದೆ ಹಾಜರುಪಡಿಸಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ರಾಮನಗರ: ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ - NEWBORN BABY FOUND DEAD