ಇದೇ ಜನವರಿ 8ರಂದು ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ತಮ್ಮ 39ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಹಾಗಾಗಿ, ಮುಂದಿನ ಸಿನಿಮಾದ ಅಪ್ಡೇಟ್ ಸಿಗುವ ಖುಷಿಯಲ್ಲಿ ಅಭಿಮಾನಿಗಳಿದ್ದಾರೆ. ಇದೀಗ ನಟ ತಮ್ಮ ಜನ್ಮದಿನಕ್ಕೂ ಮುನ್ನ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್'ನ ಮೊದಲ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದಾರೆ. ಈ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಸೂಟ್ ಆ್ಯಂಡ್ ಹ್ಯಾಟ್ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್, ಒಳಸಂಚುಗಳ ನೋಟವನ್ನೊಳಗೊಂಡಿದೆ. ವಿಂಟೇಜ್ ಕಾರಿನ ಬಳಿ ನಿಂತಿದ್ದು, ಬಾಯಲ್ಲಿ ಸಿಗರೇಟ್ ಅನ್ನು ಕಾಣಬಹುದು. ಹಿಂಬದಿ ಚಿತ್ರಣವಿದ್ದು, ನಟನ ಸಂಪೂರ್ಣ ನೋಟ ಇನ್ನಷ್ಟೇ ಅನಾವರಣಗೊಳ್ಳಬೇಕಿದೆ. ವಾತಾವರಣ ಮಿಸ್ಟ್ರಿ ಎನ್ನುವಂತಿದೆ. ಪೋಸ್ಟರ್ನ ಶೀರ್ಷಿಕೆ, "ಅವನ ಅನಿಯಂತ್ರಿತ ಉಪಸ್ಥಿತಿಯು ನಿಮ್ಮ ಅಸ್ತಿತ್ವದ ಬಿಕ್ಕಟ್ಟು" ಎಂದಿದೆ. ಇದು ಚಿತ್ರದ ಕಥಾಹಂದರದ ಸುತ್ತಲಿನ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ. ಪೋಸ್ಟರ್ನಲ್ಲಿ "8-1-25, 10:25 AM" ಎಂದು ಸಹ ಉಲ್ಲೇಖಿಸಲಾಗಿದ್ದು, ಅವರ ಹುಟ್ಟುಹಬ್ಬದಂದು ಅವರ ಅಭಿಮಾನಿಗಳಿಗೆ ಸರ್ಪ್ರೈಸ್ ಸಿಗೋದು ಪಕ್ಕಾ ಆಗಿದೆ.
'ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್' ಎಂಬ ಟ್ಯಾಗ್ಲೈನ್ ಹೊಂದಿರುವ ಸಿನಿಮಾ ಶೀರ್ಷಿಕೆ, ಟಾಕ್ಸಿಕ್ ಅಸ್ತಿತ್ವ ಮತ್ತು ಆಂತರಿಕ ಸಂಘರ್ಷದ ವಿಷಯಗಳನ್ನಾಧರಿಸಿ ಬರಲಿದೆ ಎಂಬ ಸುಳಿವು ಕೊಟ್ಟಿದೆ. ಕೆಜಿಎಫ್ ಸ್ಟಾರ್ನ ಪಾತ್ರ ಸಖತ್ ಪವರ್ಫುಲ್ ಆಗಿ ಮೂಡಿಬರಲಿದೆ ಎಂಬ ಭರವಸೆ ಇದೆ. ಸಿನಿಮಾ ಬಲವಾದ ನಿರೂಪಣಾ ಶೈಲಿಗೆ ಹೆಸರುವಾಸಿಯಾಗಿರುವ ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಬರುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿ ವೆಂಕಟ್ ಕೆ. ನಾರಾಯಣ್ ಮತ್ತು ಯಶ್ ನಿರ್ಮಾಣ ಮಾಡುತ್ತಿದ್ದಾರೆ. ಈ ಬಿಗ್ ಬಜೆಟ್ ಪ್ರಾಜೆಕ್ಟ್ ಸಾಂಪ್ರದಾಯಿಕ ಕಥೆ ಹೇಳುವಿಕೆಯನ್ನು ಮೀರಲಿದೆ ಎಂದು ನಿರೀಕ್ಷಿಸಲಾಗಿದ್ದು, ಪ್ರೇಕ್ಷಕರಿಗೆ ರೋಮಾಂಚಕ ಅನುಭವ ಒದಗಿಸುವ ಭರವಸೆ ಇದೆ.
ಇದನ್ನೂ ಓದಿ: ಧನರಾಜ್ ಆಚಾರ್ ಮನೆಗೆ ಗೋಲ್ಡ್ ಸುರೇಶ್ ಭೇಟಿ:ಮಾವನಾಗಿ ಕಂದಮ್ಮನಿಗೆ ತೊಟ್ಟಿಲು ಉಡುಗೊರೆ ಕೊಟ್ಟ ಮಾಜಿ ಸ್ಪರ್ಧಿ
ಯಶ್ ತಮ್ಮ ಹುಟ್ಟುಹಬ್ಬಕ್ಕೂ ಮುನ್ನ ತಮ್ಮ ಅಭಿಮಾನಿಗಳಿಗೆ ಪ್ರಮುಖ ಸಂದೇಶ ತಲುಪಿಸಿದ್ದಾರೆ. ಸುರಕ್ಷತೆ ಆದ್ಯತೆ ಕೊಟ್ಟು ಹೊಸ ವರ್ಷದ ಸಂದರ್ಭ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಜವಾಬ್ದಾರಿಯುತ ಆಚರಣೆಯ ಮಹತ್ವವನ್ನು ಯಶ್ ಇಲ್ಲಿ ಒತ್ತಿ ಹೇಳಿದ್ದಾರೆ. ಹುಟ್ಟುಹಬ್ಬದಂದು ಶೂಟಿಂಗ್‌ನಲ್ಲಿ ತೊಡಗಿಸಿಕೊಳ್ಳುವ ಹಿನ್ನೆಲೆ ಊರಿನಲ್ಲಿ ಇರುವುದಿಲ್ಲ ಎಂದು ಹೇಳಿದ್ದಾರೆ. ಅತಿರಂಜಿತ ಆಚರಣೆಗಳಿಗಿಂತ, ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ಮಾಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ತನ್ನೂರಿನ ಶಾಲೆಗೆ ಹೊಸ ರೂಪ ಕೊಟ್ಟ ಡಾಲಿ ಧನಂಜಯ್: ಮದುವೆ ಸಂದರ್ಭವನ್ನು ಸಾರ್ಥಕಗೊಳಿಸಿದ ನಟ
ಮನವಿ ಪೋಸ್ಟ್ನಲ್ಲೇನಿತ್ತು? ''ಅಭಿಮಾನಿಗಳಿಗೆ ನಮಸ್ಕಾರ, ನಿಮ್ಮೆಲ್ಲರ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ, ಹೊಸ ಭರವಸೆಗಳೊಂದಿಗೆ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಸ್ವಾಗತಿಸೋಣ. ಸಿನಿಮಾ ಕೆಲಸ ನಿಮಿತ್ತ ನಾನು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ಬಬ್ಬರ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಮನವಿ. ಹಾಗಾಗಿ ಫ್ಲೆಕ್ಸ್, ಬ್ಯಾನರ್ಗಳ ಯಾವುದೇ ಆಡಂಬರ ಮಾಡದೇ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೇ, ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದಿಲ್ಲ. ಆದಷ್ಟು ಬೇಗ ನಿಮ್ಮನ್ನೆಲ್ಲ ಭೇಟಿಯಾಗುತ್ತೇನೆ. ನಿಮ್ಮ ಪ್ರೀತಿಯ ಯಶ್'' ಎಂದು ಬರೆದುಕೊಂಡಿದ್ದರು.