ತುಳು ಸಿನಿಮಾದ ಖ್ಯಾತ ನಟ, ನಿರ್ದೇಶಕ, 'ತೆಲಿಕೆದ ಬೊಳ್ಳಿ' ಖ್ಯಾತಿಯ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ 'ಪುರುಷೋತ್ತಮನ ಪ್ರಸಂಗ'. ಶೀರ್ಷಿಕೆಯಿಂದಲೇ ಚಂದನವನದಲ್ಲಿ ಗಮನ ಸೆಳೆಯುತ್ತಿರೋ ಪುರುಷೋತ್ತಮನ ಪ್ರಸಂಗ ಚಿತ್ರಕ್ಕೆ ಸ್ಯಾಂಡಲ್ವುಡ್ ಅಧ್ಯಕ್ಷನ ಸಾಥ್ ಸಿಕ್ಕಿದೆ. ಹೌದು, ಬಹುತೇಕ ಶೂಟಿಂಗ್ ಮುಗಿಸಿರೋ ಈ 'ಪುರುಷೋತ್ತಮನ ಪ್ರಸಂಗ' ಚಿತ್ರದ ಟ್ರೇಲರ್ ಅನ್ನು ನಟ ಶರಣ್ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ನಟ ಶರಣ್, ಪರುಷೋತ್ತಮನ ಪ್ರಸಂಗ ಶೀರ್ಷಿಕೆಯೇ ಮನ ಮುಟ್ಟುವಂತಿದೆ. ಪುರುಷೋತ್ತಮ ಎಂದರೆ ರಾಮ. ಆ ರಾಮನ ಹೆಸರಿನಲ್ಲಿ ಬರುತ್ತಿರುವ ಈ ಚಿತ್ರ ಖಂಡಿತವಾಗಿಯೂ ಗೆಲ್ಲುತ್ತದೆ. ಟ್ರೇಲರ್ ನೋಡಿದಾಗ, ಅಜಯ್ ಅವರು ನಾಯಕನಾಗಿ ನಟಿಸಿರುವ ಮೊದಲ ಚಿತ್ರ ಎಂದು ಅನಿಸುವುದಿಲ್ಲ. ಅಷ್ಟು ಚೆನ್ನಾಗಿ ನಿರ್ಮಾಪಕ ರವಿಕುಮಾರ್ ಅವರ ಪುತ್ರ ಅಭಿನಯಿಸಿದ್ದಾರೆ. ನಾನು ಟ್ರೇಲರ್ಗೆ ಧ್ವನಿ ನೀಡಿದ್ದೇನೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.
ಈ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಅರ್ಜುನ್ ಕಾಪಿಕಾಡ್, ಇದೊಂದು ಉತ್ತಮ ಹಾಸ್ಯ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ. ನಮ್ಮ ತಂದೆ ದೇವದಾಸ್ ಕಾಪಿಕಾಡ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಮೊದಲ ಕನ್ನಡ ಚಿತ್ರವಿದು. ನಾನು ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದಗಳು ಎಂದು ತಿಳಿಸಿದರು.