ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ವಿಚಾರವಾಗಿ ಕನ್ನಡ ಚಿತ್ರರಂಗದ ಯಾವೊಬ್ಬ ತಾರೆಯರು, ನಿರ್ದೇಶಕರಾಗಲಿ ಮಾತನಾಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಖಾಸಗಿ ಕಾರ್ಯಕ್ರಮದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನಟ ದರ್ಶನ್ ಘಟನೆ ನಡೆದ ದಿನದಿಂದ ಹಿಡಿದು ಇಲ್ಲಿಯವರೆಗೆ ಏನೆಲ್ಲ ಬೆಳವಣಿಗೆ ಆಗಿದೆ ಎಂಬುದರ ಬಗ್ಗೆ ಫಿಲ್ಮ್ ಚೇಂಬರ್ ಅಧ್ಯಕ್ಷರ ಗಮನಕ್ಕೆ ಇದೆ. ಇದೇ ವಿಚಾರವಾಗಿ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕಾರ್ಯಕಾರಣಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಫಿಲ್ಮ್ ಚೇಂಬರ್ನ ಎಲ್ಲಾ ಪದಾಧಿಕಾರಿಗಳು ಭಾಗವಹಿಸಲಿದ್ದು, ಈ ಸಭೆಯಲ್ಲಿ ದರ್ಶನ್ ವಿಚಾರದ ಬಗ್ಗೆ ಚರ್ಚೆ ಮಾಡಲಿದ್ದೇವೆ. ಈ ವೇಳೆ ಹಿರಿಯರೆಲ್ಲ ಸೇರಿ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದರು.
ಪ್ರಜಾಪ್ರಭುತ್ವದಲ್ಲಿ ಅಸಹಕಾರ ಮಾಡಬಹುದು; ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬ್ಯಾನ್ ಎಂಬಂತಹ ಪದವನ್ನು ಯಾರು ಯಾರ ಮೇಲೂ ಬಳಸುವುದಕ್ಕೆ ಆಗಲ್ಲ. ಬೇಕಿದ್ದರೆ ನಾವು ಅಸಹಕಾರ ಮಾಡಬಹುದು. ದರ್ಶನ್ರನ್ನ ಬ್ಯಾನ್ ಮಾಡೋದಿಕ್ಕೆ ಆಗೋಲ್ಲ. ಏಕೆಂದರೆ ಕಲಾವಿದರ ಸಂಘದಲ್ಲಿ ಈ ಬಗ್ಗೆ ಚರ್ಚೆ ಆಗಬೇಕು. ಈಗಾಗಲೇ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ಲೈನ್ ವೆಂಕಟೇಶ್, ದೊಡ್ಡಣ್ಣ ಸಂಪರ್ಕ ಮಾಡಿದ್ದಾರೆ. ದರ್ಶನ್ ವಿಚಾರ ಮಾತನಾಡಿದ್ದಾರೆ. ಇಲ್ಲಿ ಎಲ್ಲಾ ಕಲಾವಿದರ ಅಭಿಪ್ರಾಯ ಬೇಕು. ಅದಕ್ಕೆ ಇಂದು ಸಂಜೆ 4 ಗಂಟೆಗೆ ಫಿಲ್ಮ್ ಚೇಂಬರ್ನಲ್ಲಿ ಸಭೆ ಕರೆದಿದ್ದೇವೆ. ಇಲ್ಲಿ ಏನು ಮಾತುಕತೆ ಆಗುತ್ತೆ ನೋಡಬೇಕು ಅಂತಾ ಉಮೇಶ್ ಬಣಕಾರ್ ಹೇಳಿದ್ದಾರೆ.