'ಬಿಗ್ ಬಾಸ್' ಬಹುಭಾಷೆಗಳಲ್ಲಿ ಪ್ರಸಾರ ಕಾಣುವ ಭಾರತೀಯ ಮನರಂಜನಾ ಕ್ಷೇತ್ರದ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಹಿಂದಿ ಬಿಗ್ ಬಾಸ್ ತನ್ನದೇ ಆದ ದೊಡ್ಡ ಫ್ಯಾನ್ ಬೇಸ್ ಹೊಂದಿದೆ. ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುವ ಈ ಕಾರ್ಯಕ್ರಮ ತನ್ನ 18ನೇ ಸೀಸನ್ನ ಕೊನೆ ಘಟ್ಟದಲ್ಲಿದ್ದು, ಗ್ರ್ಯಾಂಡ್ ಫಿನಾಲೆಗೆ ಕೌಂಟ್ಡೌನ್ ಆರಂಭವಾಗಿದೆ.
ಹೌದು, ಬಿಗ್ ಬಾಸ್ ಹಿಂದಿ ಸೀಸನ್ 18ರ ಗ್ರ್ಯಾಂಡ್ ಫಿನಾಲೆ ಸುತ್ತಲಿನ ಉತ್ಸಾಹ ಉತ್ತುಂಗಕ್ಕೇರಿದೆ. ಈ ಸೀಸನ್ನ ಡ್ರಾಮ್ಯಾಟಿಕ್ ಕ್ಲೈಮ್ಯಾಕ್ಸ್ಗೆ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದಾರೆ. ಭಾಯ್ಜಾನ್ ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಸೀಸನ್ 18ರ ಫಿನಾಲೆ ಜನವರಿ 19, 2025ರಂದು ನಡೆಯಲಿದ್ದು, ಮನರಂಜನೆ, ಅಚ್ಚರಿಗಳು ಮತ್ತು ಆಚರಣೆಗಳುಳ್ಳ ಸಂಜೆಯ ಭರವಸೆ ನೀಡಿದೆ. ಸಲ್ಮಾನ್ ಖಾನ್ ಮುಖ್ಯಭೂಮಿಕೆಯ ಮುಂಬರುವ ಬಹುನಿರೀಕ್ಷಿತ ಚಿತ್ರ 'ಸಿಕಂದರ್' ತಂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ ಎಂಬ ಊಹಾಪೋಹಗಳು ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಫಿನಾಲೆಯಲ್ಲಿ 'ಸಿಕಂದರ್' ಪ್ರಚಾರ? ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಚಿತ್ರತಂಡ ಬಿಗ್ ಬಾಸ್ ಫಿನಾಲೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸಿನಿಮಾ ಪ್ರಚಾರ ಮಾಡಲಿದೆ ಎಂದು ವರದಿಗಳು ತಿಳಿಸಿವೆ. ಎ.ಆರ್.ಮುರುಗದಾಸ್ ನಿರ್ದೇಶನದ ಮತ್ತು ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಈ ಚಿತ್ರ ಈಗಾಗಲೇ ಗ್ಲಿಂಪ್ಸ್ ಮೂಲಕ ಸಖತ್ ಸದ್ದು ಮಾಡಿದೆ. ಆ್ಯಕ್ಷನ್ ಸಿನಿಮಾವು ಇದೇ 2025ರ ಈದ್‌ಗೆ ಬಿಡುಗಡೆಯಾಗಲಿದೆ.
ಫೈನಲಿಸ್ಟ್: ಬಿಗ್ ಬಾಸ್ ಹಿಂದಿ 18ರ ಅಂತಿಮ ಸ್ಪರ್ಧಿಗಳು - ಕರಣ್ ವೀರ್ ಮೆಹ್ರಾ, ವಿವಿಯನ್ ಡಿಸೆನಾ, ಅವಿನಾಶ್ ಮಿಶ್ರಾ, ಈಶಾ ಸಿಂಗ್, ಚುಮ್ ದರಂಗ್ ಮತ್ತು ರಜತ್ ದಲಾಲ್.
ನಗದು ಬಹುಮಾನ: 6 ಮಂದಿಯ ಪೈಕಿ ಟಾಪ್ 2 ಕಂಟಸ್ಟೆಂಟ್ಸ್ ಕೊನೆಯಲ್ಲಿ ಅದ್ಧೂರಿ ವೇದಿಕೆಯನ್ನು ಅಲಂಕರಿಸಲಿದ್ದಾರೆ. ಗೆದ್ದ ಸ್ಪರ್ಧಿಯ ಹೆಸರನ್ನು ಸಲ್ಮಾನ್ ಖಾನ್ ಘೋಷಿಸಲಿದ್ದಾರೆ. ವಿಜೇತರು ಬಿಗ್ ಬಾಸ್ ಟ್ರೋಫಿ ಮತ್ತು 50 ಲಕ್ಷ ರೂಪಾಯಿ ನಗದು ಬಹುಮಾನ ಪಡೆಯಲಿದ್ದಾರೆ ಎಂದು ವರದಿಯಾಗಿದೆ.
ವಿಜೇತರು ಯಾರಾಗಬಹುದು? ವಿಜೇತರ ಬಗ್ಗೆ ಊಹಾಪೋಹಗಳು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿವೆ. ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಿರುವ ರಜತ್ ದಲಾಲ್ ಅಭಿಮಾನಿಗಳ ಮೆಚ್ಚಿನವರಾಗಿ ಹೊರಹೊಮ್ಮಿದ್ದಾರೆ. ಕರಣ್, ವಿವಿಯನ್ ಅಭಿಮಾನಗಳ ಸಂಖ್ಯೆ ಕೂಡ ಕಡಿಮೆಯೇನಿಲ್ಲ. ಅದಾಗ್ಯೂ, ಅಭಿಮಾನಿಗಳ ಮತಗಳು ನಿರ್ಣಾಯಕ ಪಾತ್ರ ವಹಿಸಿರುವುದರಿಂದ, ಪ್ರೇಕ್ಷಕರ ನಿರ್ಧಾರವೇ ಅಂತಿಮ.
ಇದನ್ನೂ ಓದಿ: ಸೈಫ್ ಅಲಿ ಖಾನ್ ಇರಿತ ಪ್ರಕರಣ: ದಾಳಿಕೋರನ ಕೃತ್ಯದ ಬಗ್ಗೆ ಕರೀನಾ ಹೇಳಿದ್ದಿಷ್ಟು
ಕಾರ್ಯಕ್ರಮ ಎಲ್ಲಿ, ಯಾವಾಗ ಪ್ರಸಾರ? ಬಿಗ್ ಬಾಸ್ 18ರ ಗ್ರ್ಯಾಂಡ್ ಫಿನಾಲೆ ಜನವರಿ 19, 2025ರಂದು ರಾತ್ರಿ 9:30ಕ್ಕೆ ಕಲರ್ಸ್ ಟಿವಿ ಮತ್ತು ಜಿಯೋ ಸಿನಿಮಾದಲ್ಲಿ ಪ್ರಸಾರವಾಗಲಿದೆ. ಈ ಫಿನಾಲೆ ಸುಮಾರು ಮೂರು ಗಂಟೆಗಳ ಕಾಲ ನಡೆಯುವ ನಿರೀಕ್ಷೆಯಿದೆ.
ಇದನ್ನೂ ಓದಿ: ಬಿಗ್ ಬಾಸ್ ನಿರೂಪಣೆಗೆ ಸುದೀಪ್ ಗುಡ್ ಬೈ: ಇಂದು ನಡೆಯೋದು ಕಟ್ಟ ಕಡೆಯ ಕಿಚ್ಚನ ಪಂಚಾಯ್ತಿ: ಹೊರ ಹೋಗೋದ್ಯಾರು?
ನಿಮ್ಮ ಮೆಚ್ಚಿನ ಸ್ಪರ್ಧಿಗೆ ವೋಟ್ ಮಾಡೋದೇಗೆ? ನೀವು ನಿಮ್ಮ ಮೆಚ್ಚಿನ ಸ್ಪರ್ಧಿಗಳಿಗೆ ವೋಟ್ ಮಾಡಿದ್ರಾ? ಅಥವಾ ಇನ್ನಷ್ಟೇ ಮಾಡಬೇಕಾ? ಮತ ಚಲಾಯಿಸಲು ಬಯಸುವವರ ಪೈಕಿ ನೀವು ಓರ್ವರಾಗಿದ್ದರೆ ಜಿಯೋ ಸಿನಿಮಾ ಆ್ಯಪ್ ನಿಮಗೆ ಸಹಾಯ ಮಾಡಲಿದೆ. ಜನವರಿ 19 ಅಂದರೆ ನಾಳೆ ಮಧ್ಯಾಹ್ನ 12 ಗಂಟೆಯವರೆಗೆ ವೋಟಿಂಗ್ ಲೈನ್ಸ್ ತೆರೆದಿರುತ್ತವೆ.