ಹುಬ್ಬಳ್ಳಿ: "ಬೆಳಗಾವಿಯಲ್ಲಿ ನಡೆಸುತ್ತಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶಕ್ಕೆ ಜಾರಿ ನಿರ್ದೇಶನಾಲಯದ (ಇ.ಡಿ) ಮೂಲಕ ಬಿಜೆಪಿಯು ಕಾಂಗ್ರೆಸ್ ನಾಯಕರನ್ನು ಹೆದರಿಸುತ್ತಿದೆ" ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮುಡಾ ಹಗರಣದಲ್ಲಿ 300 ಕೋಟಿ ಆಸ್ತಿ ಜಪ್ತಿ ಮಾಡಿರುವುದಾಗಿ ಇ.ಡಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಈ ಮೂಲಕ ಬಿಜೆಪಿ ದ್ವೇಷ ಹಾಗೂ ಹಿಂಸೆಯ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ನ ಪ್ರಭಾವಿ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಗುರಿಯಾಗಿಸಿ ದಾಳಿ ಮಾಡುತ್ತಿದೆ. ಈಗ ಸಿದ್ದರಾಮಯ್ಯನವರ ವಿರುದ್ಧ ಇ.ಡಿ ಅಸ್ತ್ರ ಪ್ರಯೋಗಿಸಿದೆ" ಎಂದು ದೂರಿದರು.
"ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ಗೆ ಅವಮಾನ ಮಾಡಿದನ್ನು ಮರೆಮಾಚಲು ಈ ರೀತಿ ಆರೋಪ ಮಾಡಲು ಮುಂದಾಗಿದ್ದಾರೆ. ನಾಥೂರಾಮ್ ಗೋಡ್ಸೆ ವಿಚಾರಧಾರೆ ಹೊಂದಿರುವ ಬಿಜೆಪಿಯವರು, ಗಾಂಧಿ ತತ್ವವನ್ನು ಒಪ್ಪಲು ಸಾಧ್ಯವಿಲ್ಲ. ಬಿಜೆಪಿ ಯಾವತ್ತಿಗೂ ಸಂವಿಧಾನವನ್ನು ವಿರೋಧಿಸುತ್ತ ಬಂದಿದೆ. ಬಿಜೆಪಿ ಸಾಮಾಜಿಕ ನ್ಯಾಯದ ವಿರುದ್ಧ ಕೆಲಸ ಮಾಡುತ್ತದೆ" ಎಂದು ವಾಗ್ದಾಳಿ ನಡೆಸಿದರು.
"ದೆಹಲಿಯಲ್ಲಿ ಕಾಂಗ್ರೆಸ್ ತನ್ನ ಸ್ವಂತ ಶಕ್ತಿಯ ಮೇಲೆ ಚುನಾವಣೆಗೆ ಸ್ಪರ್ಧಿಸಲಿದೆ. ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಆ ಕಾರಣಕ್ಕೆ ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಿದೆ" ಎಂದು ಹೇಳಿದರು.
75 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ: ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, "ಮಹಾತ್ಮ ಗಾಂಧಿ ವಿಚಾರಧಾರೆಗಳನ್ನು ದೇಶದ ಮೂಲೆ ಮೂಲೆಗೂ ತಿಳಿಸುವ ಉದ್ದೇಶದಿಂದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ಆಯೋಜಿಸಲಾಗಿದೆ. ಇದು ಇತಿಹಾಸದ ಪುಟದಲ್ಲಿ ಸೇರ್ಪಡೆಯಾಗಲಿದೆ. ಇದು ಎಐಸಿಸಿ ಕಾರ್ಯಕ್ರಮವಾಗಿದೆ. ಇದರ ಜವಾಬ್ದಾರಿಯನ್ನು ರಾಜ್ಯದಲ್ಲಿ ಕೆಪಿಸಿಸಿ ವಹಿಸಿಕೊಂಡಿದೆ. ಹೀಗಾಗಿ, ಜ.21ರಂದು ನಡೆಯುವ ಸಮಾವೇಶದ ಪೂರ್ವಭಾವಿ ಸಭೆಯನ್ನು ಇಂದು ಮಾಡಿದ್ದೇವೆ. ಧಾರವಾಡ ಜಿಲ್ಲೆಯಿಂದಲೇ 75 ಸಾವಿರಕ್ಕೂ ಅಧಿಕ ಜನರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅಲ್ಲದೇ ರಾಜ್ಯಾದ್ಯಂತ ಜನರು ಭಾಗವಹಿಸಲು ಕರೆ ಕೊಟ್ಟಿದ್ದೇವೆ" ಎಂದರು.
ಇದೇ ವೇಳೆ, ನಕಲಿ ಗಾಂಧಿಗಳು ಸಮಾವೇಶವನ್ನು ನಡೆಸುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿ, "ನಾವೆಲ್ಲರೂ ಅಸಲಿ ಗಾಂಧಿಗಳು, ಗೋಡ್ಸೆ ಸಂತತಿಯವರು ನಕಲಿ ಗಾಂಧಿಗಳೆಂದು ಟೀಕೆ ಮಾಡುವುದು ಸಹಜ" ಎಂದು ತಿರುಗೇಟು ನೀಡಿದರು.
ರಾಷ್ಟ್ರೀಯ ಅಧ್ಯಕ್ಷರು ಏನನ್ನೂ ಮಾತನಾಡಬೇಡಿ ಎಂದಿದ್ದಾರೆ: ತಾನು ಮಂತ್ರಿ ಸ್ಥಾನ ಬಿಟ್ಟು ಅಧ್ಯಕ್ಷ ಸ್ಥಾನ ಉಳಿಸಿಕೊಂಡಿದ್ದೆ ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಡಿಕೆಶಿ, ''ನಮ್ಮ ರಾಷ್ಟ್ರೀಯ ಅಧ್ಯಕ್ಷ ಯಾರೂ ಕೂಡ ಏನನ್ನೂ ಮಾತನಾಡಬೇಡಿ ಎಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರ ಮಾತಿನಂತೆ ನಾವು ಮಾತನಾಡಲ್ಲ, ಉಳಿದವರೂ ಮಾತನಾಡಬಾರದು'' ಎಂದರು.
ಇದನ್ನೂ ಓದಿ: ಗಾಂಧಿ ಬಾವಿಯ ನೀರನ್ನು ಬಳಸಿ, ಅಲ್ಲಿಂದಲೇ ಕೊಳೆ ತೊಳೆಯುವ ಕೆಲಸ ಮಾಡುತ್ತೇವೆ : ಡಿ ಕೆ ಶಿವಕುಮಾರ್
ಇದನ್ನೂ ಓದಿ: ಸುವರ್ಣಸೌಧದ ಬಳಿ ಗಾಂಧಿ ಪ್ರತಿಮೆ ಅನಾವರಣಕ್ಕೆ ಸ್ವಾತಂತ್ರ್ಯ ಹೋರಾಟಗಾರರಿಗೂ ಆಹ್ವಾನ : ಡಿಸಿಎಂ ಡಿ ಕೆ ಶಿವಕುಮಾರ್