ಹುಬ್ಬಳ್ಳಿ: ಸಮಸ್ಯೆಯ ಸುಳಿಯಲ್ಲಿರುವ ಕಮರಿಪೇಟೆ ಪೊಲೀಸ್ ಠಾಣೆ ಕಟ್ಟಡದ ಸ್ಥಳಾಂತರಕ್ಕೆ ಕಾಲ ಕೂಡಿ ಬಂದಿದೆಯಾದರೂ, ಸ್ಥಳಾಂತರ ಭಾಗ್ಯ ಮಾತ್ರ ಇನ್ನೂ ಬಂದಿಲ್ಲ!
15 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಕಟ್ಟಡ ಇದಾಗಿದ್ದು, ರಾಜಕಾಲುವೆ ಮೇಲೆಯೇ ನಿರ್ಮಿಸಲಾಗಿದೆ. ಇದೇ ರಾಜಕಾಲುವೆ ಮೇಲೆ ಪಕ್ಕದ ರಾಷ್ಟ್ರೀಯ ಹೆದ್ದಾರಿ ಸಹ ಹಾದು ಹೋಗಿದ್ದು, ಕಾಲುವೆಯ ತಳಭಾಗ ಅಲ್ಲಲ್ಲಿ ಶಿಥಿಲವಾಗಿದೆ. ಠಾಣೆಯ ಎದುರು ಸರಕು ತುಂಬಿದ ಲಾರಿಯೋ ಅಥವಾ ಬೃಹತ್ ವಾಹನವೋ ಸಾಗಿದರೂ ಸಾಕು, ಕಾಲುವೆಯ ತಡೆಗೋಡೆ ಕಂಪಿಸಿದಂತಾಗುತ್ತದೆ. ಠಾಣೆಯ ಕಟ್ಟಡ ಕೂಡ ಗಡಗಡ ನಡುಗಿದಂತೆ ಭಾಸವಾಗುತ್ತದೆ. ಯಾವಾಗ ಏನಾಗುತ್ತದೆಯೋ ಎಂಬ ಆತಂಕ ಶುರುವಾಗಿದ್ದು, ಪೊಲೀಸರು ಭಯದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಠಾಣೆಯು ಬಳಕೆಗೆ ಯೋಗ್ಯವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸ್ಪಷ್ಟನೆ ಕೂಡ ನೀಡಿದೆ.
ಸ್ಥಳಾಂತರಕ್ಕೆ ಮೌಖಿಕ ಆದೇಶ: ಇಂತಹದ್ದೊಂದು ಆತಂಕದ ವರದಿಯ ಬೆನ್ನಲ್ಲೇ 2024ರ ಮೇ 15ರಂದು ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಇಂಜಿನಿಯರ್ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಸ್ಥಳಾಂತರ ಕುರಿತು ಮೌಖಿಕ ಆದೇಶ ಕೂಡ ನೀಡಿದ್ದರು. ಈ ಹಿನ್ನೆಲೆಯಲ್ಲಿ ಠಾಣೆ ಸ್ಥಳಾಂತರಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ವಲಯ 9ರ ಸಹಾಯಕ ಆಯುಕ್ತರು ಮೇ 23ರಂದೇ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ತಿಳಿಸಿದ್ದರು. ಆದರೆ, ಈಗ 8 ತಿಂಗಳಾಗುತ್ತ ಬಂದರೂ ಠಾಣೆ ಮಾತ್ರ ಸ್ಥಳಾಂತರವಾಗಿಲ್ಲ.
ಸೂಕ್ತ ಸ್ಥಳ ಗುರುತಿಸಿ ಸ್ಥಳಾಂತರ: ಈ ಕುರಿತಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯೆ ನೀಡಿದ್ದು, ''ಈಗಾಗಲೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಅವರಿಗೆ ಮಾಹಿತಿ ನೀಡಿದ್ದೇವೆ. ಈ ಕುರಿತಂತೆ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲೂ ಠರಾವು ಮಾಡಲಾಗಿದೆ. ಸೂಕ್ತವಾದ ಸ್ಥಳ ಗುರುತಿಸಿ ಸ್ಥಳಾಂತರ ಮಾಡುವಂತೆ ಹೇಳಲಾಗಿದೆ. ಠಾಣೆ ಸ್ಥಳಾಂತರವಾದ ಮೇಲೆ ಈ ಠಾಣೆಯನ್ನು ತೆರವುಗೊಳಿಸಲಾಗುವುದು'' ಎಂದು ಮಾಹಿತಿ ನೀಡಿದರು.
ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಸ್ಥಳಾಂತರ: ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾತನಾಡಿ, ''ಕಮರಿಪೇಟೆ ಪೊಲೀಸ್ ಠಾಣೆಯನ್ನು ರಾಜಕಾಲುವೆ ಮೇಲೆ ನಿರ್ಮಾಣ ಮಾಡಲಾಗಿದೆ. ಈ ವರ್ಷ ಸಾಕಷ್ಟು ಮಳೆ ಆಗಿದ್ದರಿಂದ ಕಟ್ಟಡಕ್ಕೂ ಸಣ್ಣ-ಪುಟ್ಟ ಹಾನಿಯಾಗಿದೆ. ಹೀಗಾಗಿ, ಠಾಣೆ ಸ್ಥಳಾಂತರ ಮಾಡುವುದು ಸೂಕ್ತ ಎಂದು ಪಾಲಿಕೆ ಅಧಿಕಾರಿಗಳು ಕೂಡ ತಿಳಿಸಿದ್ದಾರೆ'' ಎಂದರು.
''ಈಗಾಗಲೇ ಮಹಾನಗರ ಪಾಲಿಕೆ ಒಂದು ಸಮುದಾಯ ಭವನವನ್ನು ಗುರುತಿಸಿಕೊಟ್ಟಿದೆ. ಆದರೆ, ಅಲ್ಲಿ ನಮ್ಮ ಇಲಾಖೆಯ ಜಾಗ ಹತ್ತಿರದಲ್ಲಿಲ್ಲ. ಮಹಾನಗರ ಪಾಲಿಕೆಯ ವ್ಯಾಪ್ತಿಯ 4-5 ಸಾವಿರ ಅಡಿ ಜಾಗ ಬೇಕಾಗುತ್ತದೆ. ಸಿಬ್ಬಂದಿಗೆ ಕೊಠಡಿ ಅಗವ್ಯವಾಗಿದೆ. ಜೊತೆಗೆ, ಜನ ಬರುವವರು ಹೋಗುವವರು ಇರುತ್ತಾರೆ. ಅದರ ಜೊತೆಗೆ ಸೀಜ್ ಮಾಡಿದ ವಾಹನಗಳನ್ನು ನಿಲ್ಲಿಸಲು ಜಾಗದ ಅವಶ್ಯಕವಾಗಿದೆ. ಹೀಗಾಗಿ, ಸೂಕ್ತ ಜಾಗ ಗುರುತಿಸಿಕೊಡಲು ಮಹಾನಗರ ಪಾಲಿಕೆಗೆ ಮನವಿ ಮಾಡಲಾಗಿದೆ. ಈಗ ಸದ್ಯಕ್ಕೆ ಒಂದು ಜಾಗವನ್ನು ಗುರುತು ಮಾಡಲಾಗಿದ್ದು, ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಸ್ಥಳಾಂತರ ಮಾಡಲಾಗುವುದು'' ಎಂದು ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯದ ಈ ಪೊಲೀಸ್ ಸ್ಟೇಷನ್ಗೆ ದೇಶದ ಹತ್ತನೇ ಅತ್ಯುತ್ತಮ ಠಾಣೆಯ ಹೆಗ್ಗಳಿಕೆ - TEKKALAKOTE POLICE STATION