ಕನ್ನಡ ಚಿತ್ರರಂಗದ ಹಿರಿಯ ಛಾಯಾಗ್ರಾಹಕ, ನಿರ್ಮಾಪಕ, ನಿರ್ದೇಶಕ ಹಾಗೂ ಚಲನಚಿತ್ರ ನಿರ್ಮಾಪಕರ ಸಂಘದ ಪ್ರಥಮ ಅಧ್ಯಕ್ಷರೂ ಆಗಿದ್ದ ಹೆಚ್.ಎಂ.ಕೆ ಮೂರ್ತಿ ಅವರ ಮೊಮ್ಮಗ ಯಶಸ್ವ ಈಗ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಅಣಿಯಾಗಿದ್ದಾರೆ. ಎಮೋಷನಲ್ ಹಾಗೂ ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ 'ಅಗ್ನಿಲೋಕ' ಎಂಬ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸುತ್ತಿದ್ದಾರೆ. ಹೆಚ್.ಎಂ.ಕೆ. ಮೂರ್ತಿ ಅವರ ಮಗ ರಾಜೇಶ್ ಮೂರ್ತಿ ಕೂಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಇವರ ಮಗ ಯಶಸ್ವ ಅವರನ್ನು ಆ್ಯಕ್ಷನ್ ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.
ಈ ಕುರಿತು ಉದಯೋನ್ಮುಖ ನಟ ಯಶಸ್ವ ಮಾತನಾಡಿ, ನನ್ನ ತಾತ - ತಂದೆಯಂತೆಯೇ ಚಿತ್ರರಂಗದಲ್ಲಿ ಕಲಾವಿದ, ತಂತ್ರಜ್ಞನಾಗಿ ಮುಂದುವರಿಯಬೇಕೆಂಬ ಮಹದಾಸೆ ಇದೆ. ಅದರಂತೆ, ಮಾಸ್ ಕಮ್ಯುನಿಕೇಶನ್ನಲ್ಲಿ ಡಿಗ್ರಿ ಮುಗಿಸಿಕೊಂಡು ವೆಲ್ ಪ್ರಿಪೇರ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದೇನೆ. ನಾನು ತಾತ ಹಾಗೂ ತಂದೆಯಂತೆ ಚಿತ್ರರಂಗದಲ್ಲಿ ಆ್ಯಕ್ಟಿಂಗ್ ಜೊತೆಗೆ ರೈಟಿಂಗ್, ಪ್ರೊಡಕ್ಷನ್ ವಿಭಾಗದಲ್ಲೂ ತೊಡಗಿಸಿಕೊಂಡಿದ್ದೇನೆ ಎಂದು ಮಾಹಿತಿ ಹಂಚಿಕೊಂಡರು.
ಮಗನ ಚಿತ್ರಕ್ಕೆ ರಾಜೇಶ್ ಮೂರ್ತಿ ಅವರೇ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಸಂಕಲನವನ್ನೂ ಸಹ ನಿರ್ವಹಿಸಿದ್ದಾರೆ. ಬೆಂಗಳೂರು, ಕೆಜಿಎಫ್, ಮಂಡ್ಯ, ಚಿಕ್ಕಮಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ತನ್ನ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿಕೊಂಡಿರುವ ಅಗ್ನಿಲೋಕ ಚಿತ್ರವೀಗ ಸೆನ್ಸಾರ್ ಟೇಬಲ್ ಮೇಲೆ ಇದೆ ಅಂತಾರೆ ಚಿತ್ರತಂಡದವರು.