ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯಭೂಮಿಕೆಯ 'ಗೋಟ್ ಲೈಫ್' ಎಂದು ಕರೆಯಲ್ಪಡುವ ಮಲಯಾಳಂ ಸಿನಿಮಾ 'ಆಡುಜೀವಿತಂ' ವಿಮರ್ಶೆ ಮತ್ತು ಬಾಕ್ಸ್ ಆಫೀಸ್ ವಿಚಾರದಲ್ಲಿ ಯಶಸ್ಸು ಕಂಡಿದೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟನ ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಅದಾಗ್ಯೂ, ಬಹುನಿರೀಕ್ಷಿತ ಸಿನಿಮಾವೊಂದರ ಕೆಲಸ ಆರಂಭವಾಗದೇ, ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ.
ಪೃಥ್ವಿರಾಜ್ ಅಭಿನಯದ ಬಿಗ್ ಬಜೆಟ್ ಚಿತ್ರ "ಕಾಲಿಯಾನ್". ಇದರ ಸ್ಕ್ರೀನ್ಪ್ಲೇಯನ್ನು ಬಿ.ಟಿ ಅನಿಲ್ ಕುಮಾರ್ ಬರೆದಿದ್ದಾರೆ. ಅಲ್ಲದೇ ಲೆಜೆಂಡರಿ ಸ್ಟಾರ್ ಸತ್ಯನ್ ಅವರ ಬಯೋಪಿಕ್ಗಾಗಿಯೂ ಸ್ಕ್ರೀನ್ಪ್ಲೇ ಬರೆದಿದ್ದು, ಇದರಲ್ಲಿ ಜಯಸೂರ್ಯ ನಟಿಸಲಿದ್ದಾರೆ. ಈ ಎರಡೂ ಚಿತ್ರಗಳು ಘೋಷಣೆಯಾದ ಸಂದರ್ಭ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿತ್ತು. ಆದ್ರೆ ಸಿನಿಮಾಗಳು ಮಾತ್ರ ಸೆಟ್ಟೇರಿಲ್ಲ.
"ಕಾಲಿಯಾನ್" ಚಿತ್ರವನ್ನು ಭಾರತೀಯ ಬಹು ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಬಹುಶಃ ಮಲಯಾಳಂನಲ್ಲಿ ಇದು ಮೊದಲ ಪ್ಯಾನ್-ಇಂಡಿಯನ್ ಸಿನಿಮಾ. ಆದ್ರೆ, ಚಿತ್ರದ ಚಿತ್ರೀಕರಣವಿನ್ನೂ ಆರಂಭವಾಗಿಲ್ಲ. ಪೃಥ್ವಿರಾಜ್ ಅವರ ಅನೇಕ ಸಂದರ್ಶನಗಳಲ್ಲಿ ಈ ಚಿತ್ರದ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಸಿನಿಮಾ ಬರಲಿದೆ ಎಂದು ಕೂಡಾ ಆಗಾಗ್ಗೆ ಹೇಳಿದ್ದರು.
ಕಳೆದ ವರ್ಷ ತಂಡದಿಂದ ಬಂದ ಅಪ್ಡೇಟ್ಗಳು ಶೀಘ್ರದಲ್ಲೇ ಶೂಟಿಂಗ್ ಶುರುವಾಗಲಿದೆ ಎಂಬುದಾಗಿ ಸೂಚಿಸಿತ್ತು. ಆದ್ರೆ ವರ್ಷ ಕಳೆದರೂ ಪ್ರೀ ಪ್ರೊಡಕ್ಷನ್ ಕೆಲಸಗಳು ಸಹ ಆರಂಭವಾಗಿಲ್ಲ. ಡಾ.ಎಸ್.ಮಹೇಶ್ ನಿರ್ದೇಶನದ ಈ ಚಿತ್ರದ ಕುರಿತು ಬಿ.ಟಿ ಅನಿಲ್ ಕುಮಾರ್ ಅವರು ಈಟಿವಿ ಭಾರತದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.