ಚಾಕುವಿನಿಂದ 6 ಬಾರಿ ಗಂಭೀರ ಇರಿತಕ್ಕೊಳಗಾಗಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಇಂದು ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ತಾರೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
ಕಳೆದ ಗುರುವಾರ ಮುಂಜಾನೆ (ಬುಧವಾರ ತಡರಾತ್ರಿ) ಸೈಫ್ ಅಲಿ ಖಾನ್ ಕರೀನಾ ಕಪೂರ್ ಖಾನ್ ನಿವಾಸಕ್ಕೆ ನುಗ್ಗಿದ ವ್ಯಕ್ತಿ ನಟನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದ. ನಟನ ಮೈ ಮೇಲೆ 6 ಗಂಭೀರ ಗಾಯಗಳಾಗಿದ್ದವು. ಆ ಕೂಡಲೇ ಲೀಲಾವತಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಎಲ್ಲಾ ಚಿಕಿತ್ಸೆಗಳಿಗೂ ಬಾಲಿವುಡ್ ನಟ ಉತ್ತಮವಾಗಿ ಸ್ಪಂದಿಸಿದ ಹಿನ್ನೆಲೆ, ಆರೋಗ್ಯದಲ್ಲಿ ಶೀಘ್ರ ಚೇತರಿಕೆ ಕಂಡುಬಂದಿದೆ. 5 ದಿನಗಳ ನಂತರ, ಇಂದು (ಮಂಗಳವಾರ) ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ನಟನಿಗೆ ಮನೆಯಲ್ಲಿ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ನಟನ ಮನೆ ತಲುಪಿದ್ದು, ಅವರ ನಿವಾಸದ ಸುತ್ತಲೂ ಭದ್ರತೆ ಹೆಚ್ಚಿಸಲಾಗಿದೆ.
ಬುಧವಾರ ಮಧ್ಯರಾತ್ರಿ ಬಾಂದ್ರಾದಲ್ಲಿರುವ ನಿವಾಸಕ್ಕೆ ನುಗ್ಗಿದ ವ್ಯಕ್ತಿ ವಿರುದ್ಧದ ಹೋರಾಟದಲ್ಲಿ ಪಟೌಡಿ ಕುಟುಂಬಸ್ಥನಿಗೆ ಗಂಭೀರ ಗಾಯಗಳಾಗಿದ್ದವು. ನಟನಿಗೆ ಆರು ಚಾಕು ಇರಿತಗಳಾಗಿದ್ದು, ಎರಡು ಗಂಭೀರ ಗಾಯಗಳಾಗಿತ್ತು. ದಾಖಲಾದ ಕೂಡಲೇ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದು 5 ಗಂಟೆ ಸಮಯ ತೆಗೆದುಕೊಂಡಿತ್ತು.
ನಟನ ಕೈಯಲ್ಲಿ ಎರಡು ಮತ್ತು ಕುತ್ತಿಗೆಯ ಬಲಭಾಗದಲ್ಲಿ ಒಂದು, ಬೆನ್ನೆಲುಬಿನಲ್ಲೊಂದು ಗಂಭೀರ ಗಾಯವಾಗಿತ್ತು ಎಂದು ವೈದ್ಯರು ಈ ಹಿಂದೆ ಹೇಳಿದ್ದರು. ಬೆನ್ನುಮೂಳೆಯಲ್ಲಿ ಸಿಲುಕಿದ್ದ ಚಾಕುವನ್ನು ಹೊರತೆಗೆದು, ಗಂಭೀರ ಗಾಯಗಳಿಗೆ ಚಿಕಿತ್ಸೆ ನೀಡಿದ್ದರು. ನಟನನ್ನು ಜನವರಿ 17ರಂದು ಐಸಿಯುನಿಂದ ಸ್ಪೆಷಲ್ ರೂಮ್ಗೆ ಸ್ಥಳಾಂತರಿಸಲಾಗಿತ್ತು.
ಇದನ್ನೂ ಓದಿ: 'ಸ್ಟ್ರೆಚರ್ ತನ್ನಿ, ನಾನು ಸೈಫ್ ಅಲಿ ಖಾನ್': ರಕ್ತಸಿಕ್ತಗೊಂಡಿದ್ದ ನಟನನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಹೇಳಿದ್ದಿಷ್ಟು
ಪ್ರಕರಣದ ತನಿಖೆ ನಡೆಯುತ್ತಿದ್ದು, ಮುಂಬೈ ಪೊಲೀಸರು ಬಾಂದ್ರಾದಲ್ಲಿರುವ ನಟನ ನಿವಾಸಕ್ಕೆ ಆಗಮಿಸಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನೆರೆಯ ಬಾಂಗ್ಲಾದೇಶಿ ಪ್ರಜೆ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ (30) ನನ್ನು ಭಾನುವಾರದಂದು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಸೈಫ್ಗೆ ಚಾಕುವಿನಿಂದ ಇರಿದ ಬಳಿಕ ಆರೋಪಿ ಚೆನ್ನಾಗಿ ನಿದ್ರಿಸಿದ್ದ, ಬಟ್ಟೆ ಬದಲಿಸಿ ಪ್ರಯಾಣ ಬೆಳೆಸಿದ್ದ: ಪೊಲೀಸ್
ದಾಳಿ ನಡೆದ 70 ಗಂಟೆಗಳೊಳಗೆ ಕಾರ್ಮಿಕ ಗುತ್ತಿಗೆದಾರರ ಸುಳಿವಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದರು. ತನಿಖೆಯಲ್ಲಿ, ಶೆಹಜಾದ್ ಬಾಂಗ್ಲಾದೇಶದವನಾಗಿದ್ದು, ಸುಮಾರು 4 ತಿಂಗಳ ಹಿಂದೆ ಅಕ್ರಮವಾಗಿ ಗಡಿ ದಾಟಿದ್ದ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಕಳ್ಳತನ ಮಾಡುವ ಉದ್ದೇಶದಿಂದ ಸೈಫ್ ಮನೆಗೆ ನುಗ್ಗಿದ ಈತ ಹೋಟೆಲ್‌ಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ.