'ಕೆಜಿಎಫ್' ಸಿನಿಮಾಗಳ ಮೂಲಕ ಭಾರತದಾದ್ಯಂತ ಜನಪ್ರಿಯರಾಗಿರುವ ಪ್ರಶಾಂತ್ ನೀಲ್ ನಿರ್ದೇಶನದ ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಬಹುಬೇಡಿಕೆ ನಿರ್ದೇಶಕರೆಂದ ಮೇಲೆ ಅವರ ಚಿತ್ರಗಳ ಮೇಲಿನ ಕುತೂಹಲ ಕೊಂಚ ಹೆಚ್ಚೇ ಅಲ್ಲವೇ?. ಯಶ್ ಅಭಿನಯದ 'ಕೆಜಿಎಫ್: ಚಾಪ್ಟರ್ 1' ಮತ್ತು ಚಾಪ್ಟರ್ 2ರ ಯಶಸ್ಸಿನ ನಂತರ ಸಿನಿಪ್ರಿಯರಿಂದ ಸಾಕಷ್ಟು ಮೆಚ್ಚುಗೆ ಪಡೆದ ನಿರ್ದೇಶಕರು ಸದ್ಯ ಜೂನಿಯರ್ ಎನ್ಟಿಆರ್ ನಟನೆಯ ಚಿತ್ರದ ಮೇಲೆ ಗಮನ ಹರಿಸಿದ್ದಾರೆ.
2023ರಲ್ಲಿ 'ಸಲಾರ್' ಮೂಲಕ ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು. ಈ ಚಿತ್ರ ಕೂಡ ನಿರೀಕ್ಷೆಯಂತೆ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಇದೀಗ, ಸೌತ್ ಸೂಪರ್ ಸ್ಟಾರ್ ಅಜಿತ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಸಕತ್ ಸದ್ದು ಮಾಡುತ್ತಿದೆ. ಅದು ಕೂಡ ಒಂದಲ್ಲ, ಎರಡು ಪ್ರಾಜೆಕ್ಟ್ಗಳಲ್ಲಿ ಈ ನಟ-ನಿರ್ದೇಶಕ ಜೋಡಿ ಸಹಕರಿಸಲಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಈ ಹೆಸರಾಂತ ನಟ-ನಿರ್ದೇಶಕರು ಎರಡು ಸಿನಿಮಾಗಳಲ್ಲಿ ಕೆಲಸ ಮಾಡಲು ತಯಾರಿ ನಡೆಸುತ್ತಿದ್ದಾರೆ. ಈ ಚಿತ್ರಗಳನ್ನು ದಕ್ಷಿಣದ ಹೆಸರಾಂತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ನಿರ್ಮಿಸಲಿದ್ದಾರೆ. ಸಲಾರ್ 2 ನಂತರ ಪ್ರಶಾಂತ್ ಅವರು ಅಜಿತ್‌ಗಾಗಿ ಸತತ ಎರಡು ಚಿತ್ರಗಳನ್ನು ನಿರ್ದೇಶಿಸಲು ರೆಡಿಯಾಗಿದ್ದಾರೆ. ಆದ್ರಿದು ಎಕೆ64 ಮತ್ತು ಎಕೆ65 (ಅಜಿತ್ ಅವರ ಮುಂದಿನ ಚಿತ್ರಗಳ ಸಂಖ್ಯೆ) ಎಂಬುದಿನ್ನು ಕನ್ಫರ್ಮ್ ಆಗಿಲ್ಲ. ಪ್ರಶಾಂತ್ ನಿರ್ದೇಶನದ ಸಿನಿಮಾಗಳಿಗೂ ಮುನ್ನ ಬೇರೆ ಚಿತ್ರಗಳೂ ಬರುವ ಸಾಧ್ಯತೆ ಇದೆ.