ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿಪ್ರಿಯರಿಂದು 'ಕಲ್ಕಿ 2898 ಎಡಿ' ಅಲೆಯಲ್ಲಿ ತೇಲುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿರುವ ವಿಡಿಯೋಗಳನ್ನು ಗಮನಿಸಿದ್ರೆ, ಸಿನಿಮಾ ಸುತ್ತಲಿರುವ ಕ್ರೇಜ್ ಸ್ಪಷ್ಟವಾಗಿ ಗೋಚರಿಸುತ್ತದೆ. ಮೊದಲ ದಿನದ ಮೊದಲ ಪ್ರದರ್ಶನಕ್ಕಾಗಿ ಬಾಹುಬಲಿ ಸ್ಟಾರ್ ಫ್ಯಾನ್ಸ್ ಅದೆಷ್ಟೋ ಚಿತ್ರಮಂದಿರಗಳಲ್ಲಿ ಮುಂಜಾನೆಯೇ ಬಂದು ಸೇರಿದ್ದರು. ನಾಗ್ ಅಶ್ವಿನ್ ನಿರ್ದೇಶನದ ಈ ಭವ್ಯ ಪುರಾಣ ಪ್ರೇರಿತ ಸೈನ್ಸ್ ಫಿಕ್ಷನ್ ವೀಕ್ಷಿಸಿದವರು ಕುಣಿದು ಕುಪ್ಪಳಿಸಿದ್ದಾರೆ.
ತೆಲುಗು ಭಾಷಿಕ ಎರಡು ರಾಜ್ಯಗಳಿಂದ ಹಿಡಿದು ಭಾರತದಾದ್ಯಂತ ಮತ್ತು ಸಾಗರೋತ್ತರ ಪ್ರದೇಶಗಳವರೆಗೆ 'ಕಲ್ಕಿ 2898 ಎಡಿ' ಮೇಲೆ ಅಭಿಮಾನಿಗಳು ಪ್ರೀತಿಯ ಮಳೆಗರೆದಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲ್ಯಾಟ್‌ಫಾರ್ಮ್‌ಗಳು ಅಭಿಮಾನಿಗಳ ಸಂಭ್ರಮಾಚರಣೆಯ ಫೋಟೋ-ವಿಡಿಯೋಗಳಿಂದ ತುಂಬಿ ತುಳುಕುತ್ತಿವೆ.
ಯುಕೆಯಲ್ಲಿ, ಪ್ರಭಾಸ್ ಅಭಿಮಾನಿಗಳು ಥಿಯೇಟರ್‌ಗಳಿಂದ ಹೊರಬರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಮತ್ತೊಂದೆಡೆ, ತಾಯ್ನಾಡು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ಗಳಲ್ಲಿ ಚಿತ್ರದ ಪ್ರಥಮ ಪ್ರದರ್ಶನಕ್ಕೂ ಮುನ್ನವೇ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಪ್ರಭಾಸ್ ಅವರ ಬೃಹತ್ ಪೋಸ್ಟರ್‌ಗಳು, ಹಾರಗಳಿಂದ ಅಲಂಕರಿಸಲ್ಪಟ್ಟಿವೆ. ನಗರದ ವಿವಿಧೆಡೆ ಕಲ್ಕಿ ಪೋಸ್ಟರ್‌ಗಳು ಕಂಡುಬಂದಿವೆ.