ನವದೆಹಲಿ: ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಉದ್ದೇಶಿತ ಒಂದು ದೇಶ, ಒಂದು ಚುನಾವಣೆ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ. ವಿಪಕ್ಷಗಳ ವಿರೋಧದ ಹಿನ್ನೆಲೆಯಲ್ಲಿ ಸರ್ಕಾರ ಅದನ್ನು ವಿಸ್ತೃತ ಚರ್ಚೆಗಾಗಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಗೆ ನೀಡಲು ಒಪ್ಪಿದೆ.
ಕೇಂದ್ರ ಸರ್ಕಾರ ರಚಿಸುವ ಜೆಪಿಸಿಯಲ್ಲಿ ಕಾಂಗ್ರೆಸ್ ತನ್ನ ಸದಸ್ಯರನ್ನು ಕಳುಹಿಸಲು ನಿರ್ಧರಿಸಿದ್ದು, ಅದರಲ್ಲಿ ಸಂಸದೆ ಪ್ರಿಯಾಂಕಾ ವಾದ್ರಾ, ಮನೀಶ್ ತಿವಾರಿ, ಸುಖದೇವ್ ಭಗತ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏಕಕಾಲದಲ್ಲಿ ಚುನಾವಣೆ ನಡೆಸಲು ಅವಕಾಶ ನೀಡುವ ಎರಡು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿದ್ದನ್ನು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ತೀವ್ರವಾಗಿ ವಿರೋಧಿಸಿದ್ದವು. ಚರ್ಚೆ ಇಲ್ಲದೇ, ವಿಧೇಯಕವನ್ನು ಮಂಡಿಸಿದ್ದು ಸರ್ವಾಧಿಕಾರಿ ಧೋರಣೆ ಎಂದು ಟೀಕಿಸಿದ್ದವು.
ಜೆಪಿಸಿಗೆ ಸರ್ಕಾರ ಒಪ್ಪಿಗೆ: ವಿಪಕ್ಷಗಳ ವಿರೋಧ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯ ಮೇರೆಗೆ ವಿಧೇಯಕವನ್ನು ಹೆಚ್ಚಿನ ಚರ್ಚೆಗಾಗಿ ಜಂಟಿ ಸಂಸದೀಯ ಸಮಿತಿ ಮುಂದಿಡಲು ಕೇಂದ್ರ ಸರ್ಕಾರ ಒಪ್ಪಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬಹು ಮಹತ್ವದ ವಿಧೇಯಕದ ಕುರಿತು ಸುದೀರ್ಘ ಚರ್ಚೆ ನಡೆಯಲಿದೆ.
ಹೊಸ ಸಂಸತ್ ಭವನದಲ್ಲಿನ ವಿದ್ಯುನ್ಮಾನ ಮತಯಂತ್ರಗಳ ಮೂಲಕ ಇದೇ ಮೊದಲ ಬಾರಿಗೆ ಮತದಾನ ನಡೆಯಿತು. ವಿಧೇಯಕದ ಪರವಾಗಿ 269 ಮತ್ತು ವಿರುದ್ಧವಾಗಿ 198 ಮತಗಳು ಬಿದ್ದಿದ್ದವು.
ಸದಸ್ಯರ ಶಿಫಾರಸು ಮಾಡಿದ ಟಿಎಂಸಿ: ಇದೇ ವೇಳೆ, ವಿಧೇಯಕವನ್ನು ಕಟುವಾಗಿ ವಿರೋಧಿಸುತ್ತಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೂಡ ತನ್ನ ಸದಸ್ಯರನ್ನು ಜೆಪಿಸಿಗೆ ಶಿಫಾರಸು ಮಾಡಿದೆ. ತನ್ನ ಸಂಸದರಾದ ಕಲ್ಯಾಣ್ ಬ್ಯಾನರ್ಜಿ ಮತ್ತು ಸಾಕೇತ್ ಗೋಖಲೆ ಅವರನ್ನು ಪಕ್ಷ ಸೂಚಿಸಿದೆ.
ಇದನ್ನೂ ಓದಿ: ಅಂಬೇಡ್ಕರ್ ಕುರಿತ ಹೇಳಿಕೆ ವಿವಾದ: ರಾಜೀನಾಮೆ ನೀಡಿ, ಕ್ಷಮೆ ಕೇಳಿ - ಖರ್ಗೆ; 15 ವರ್ಷ ವಿಪಕ್ಷದಲ್ಲೇ ಕಾಂಗ್ರೆಸ್- ಅಮಿತ್ ಶಾ