ಸೋಮವಾರ ರಾತ್ರಿ ಅಸ್ಪತ್ರೆಗೆ ದಾಖಲಾದ ಭಾರತೀಯ ಚಿತ್ರರಂಗದ ಹೆಸರಾಂತ ನಟ ರಜನಿಕಾಂತ್, ಸೂಕ್ತ ಚಿಕಿತ್ಸೆ ಪಡೆದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಸೌತ್ ಸೂಪರ್ ಸ್ಟಾರ್ ಶೀಘ್ರ ಗುಣಮುಖರಾಗಲೆಂದು ಅಪಾರ ಸಂಖ್ಯೆಯ ಅಭಿಮಾನಿಗಳು ಆಶಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಜನಿ ಪತ್ನಿ ಲತಾ ರಜನಿಕಾಂತ್ ಅವರೊಂದಿಗೆ ಫೋನ್ ಕರೆ ಮೂಲಕ ಆರೋಗ್ಯ ವಿಚಾರಿಸಿದ್ದಾರೆ. ಈ ಬಗ್ಗೆ ಕಾಳಜಿ ತೋರಿರುವ ಪ್ರಧಾನಿ ಮೋದಿ, ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.
ಸೂಪರ್ ಸ್ಟಾರ್ ಆರೋಗ್ಯ ವಿಚಾರಿಸಿದ ಪಿಎಂ:ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಸೋಷಿಯಲ್ ಮೀಡಿಯಾ ಎಕ್ಸ್ ಪ್ಲ್ಯಾಟ್ಫಾರ್ಮ್ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. "ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶ್ರೀಮತಿ ಲತಾ ರಜಿನಿಕಾಂತ್ ಅವರೊಂದಿಗೆ ದೂರವಾಣಿ ಕರೆ ಮೂಲಕ ರಜನಿಕಾಂತ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ರಜನಿಕಾಂತ್ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾರೆ ಎಂದು ಅವರ ಯೋಗಕ್ಷೇಮದ ಬಗ್ಗೆ ಪ್ರಧಾನಮಂತ್ರಿಯವರಿಗೆ ತಿಳಿಸಲಾಯಿತು. ರಜನಿಕಾಂತ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ಹಾರೈಸಿದ್ದಾರೆ'' ಎಂದು ಬರೆದುಕೊಂಡಿದ್ದಾರೆ.
ಸೂಕ್ತ ಚಿಕಿತ್ಸೆ ಪಡೆದ ನಟ: 73ರ ಹರೆಯದ ಸೂಪರ್ ಸ್ಟಾರ್ ಪ್ರಸ್ತುತ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರ ಹೃದಯದ ಮುಖ್ಯ ರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಲು ಶಸ್ತ್ರಚಿಕಿತ್ಸೆಯೇತರ ವಿಧಾನದ ಸಹಾಯ ಪಡೆಯಲಾಗಿದೆ. ರಜನಿಕಾಂತ್ ಅವರ ಸ್ಥಿತಿ ಸ್ಥಿರವಾಗಿದೆ. ಅವರೀಗ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಮುಂದಿನ ಕೆಲ ದಿನಗಳಲ್ಲಿ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.