ನಂದೂರ್ಬಾರ್(ಮಹಾರಾಷ್ಟ್ರ): ಬುಡಕಟ್ಟು ಸಮುದಾಯದ ಪ್ರಗತಿಪರ ಯುವ ರೈತನನ್ನು ದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅಂದು ರಾಷ್ಟ್ರಪತಿ ಯುವ ರೈತನನ್ನು ಸನ್ಮಾನಿಸಲಿದ್ದಾರೆ.
ನಂದೂರ್ಬಾರ್ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೃಷಿ ಅವರ ಮುಖ್ಯ ಕಸುಬಾಗಿದೆ. ಇವರು ಮೆಣಸಿನಕಾಯಿ, ಜೋಳ, ಗೋಧಿ, ರಾಗಿ ಮತ್ತು ಹತ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಕೃಷಿಯ ಜೊತೆಗೆ ಕೋಳಿ ಸಾಕಣೆ, ಮೇಕೆ ಸಾಕಣೆ, ಹೈನುಗಾರಿಕೆ ಮಾಡುತ್ತಾರೆ. ಆದರೆ, ಜಿಲ್ಲೆಯ ನವಾಪುರ ತಾಲೂಕಿನ ಭಾವ್ರೆ ಗ್ರಾಮದ ಬುಡಕಟ್ಟು ರೈತ ಯೋಹಾನ್ ಅರವಿಂದ್ ಗಾವಿತ್ ಅವರು ಪಂಜರ ಮೀನು ಕೃಷಿಯಲ್ಲಿ ಯಶಸ್ಸು ಸಾಧಿಸಿ, ಇತರರಿಗೆ ಮಾದರಿಯಾಗಿದ್ದಾರೆ.
ಸಾಂಪ್ರದಾಯಿಕ ಕೃಷಿಗೆ ಆಧುನಿಕತೆ ಸೇರಿಸಿ ರೈತ ಯೋಹಾನ್ ಅರವಿಂದ್ ಅವರು ಪಂಜರ ಮೀನು ಕೃಷಿಯಲ್ಲಿ ಮಾಡಿರುವ ಸಾಧನೆ ಗುರುತಿಸಿ, ದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂದು ರೈತನನ್ನು ಸನ್ಮಾನಿಸಲಿದ್ದಾರೆ. ಈ ಮೂಲಕ ಬುಡಕಟ್ಟು ಸಮುದಾಯದ ಯುವ ಪ್ರಗತಿಪರ ರೈತ ಇಡೀ ಜಿಲ್ಲೆ ಮತ್ತು ರಾಜ್ಯಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ.
ಹಳ್ಳಿಯಿಂದ ದೆಹಲಿಗೆ ಸ್ಪೂರ್ತಿದಾಯಕ ಪ್ರಯಾಣ: ಭಾವ್ರೆ ಗ್ರಾಮದ ನಿವಾಸಿ ಯೋಹಾನ್ ಅರವಿಂದ್ ಎಂಟು ವರ್ಷಗಳ ಹಿಂದೆ ಸಾಂಪ್ರದಾಯಿಕ ಕೃಷಿಯೊಂದಿಗೆ ಮೀನು ಸಾಕಾಣಿಕೆ ಪ್ರಾರಂಭಿಸಿದ್ದರು. ಅವರು ಮೀನು ಕೃಷಿಯಲ್ಲಿ ಯಶಸ್ಸು ಸಾಧಿಸಲು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸರ್ಕಾರದಿಂದ ಶೇ.60 ರಷ್ಟು ಸಹಾಯಧನ ಪಡೆದಿದ್ದರು. ಸಹಾಯಧನದಿಂದ ಬಂದ 32.40 ಲಕ್ಷ ಬಳಸಿಕೊಂಡು 18 ಪಂಜರಗಳನ್ನು ನಿರ್ಮಿಸಿ ತಮ್ಮ ಗ್ರಾಮದ ಕೆರೆಯಲ್ಲಿ ಮೀನು ಸಾಕಣೆ ಆರಂಭಿಸಿದ್ದರು.
ಯೋಹಾನ್ ಅರವಿಂದ್, ಮೀನು ಕೃಷಿಯನ್ನು ಜೀವನೋಪಾಯಕ್ಕೆ ಸೀಮಿತಗೊಳಿಸಲಿಲ್ಲ, ಬದಲಾಗಿ ಮೀನು ವ್ಯಾಪಾರದ ಮೂಲಕ ಇತರ ರೈತರನ್ನು ಸಹ ಆರ್ಥಿಕವಾಗಿ ಸಬಲಗೊಳಿಸಿದರು. ಅವರು ತಮ್ಮ ಪಂಜರದಲ್ಲಿ ಮೀನು ಮರಿಗಳನ್ನು ಬೆಳೆಸಿ, ರೈತರಿಗೆ ಸರಬರಾಜು ಮಾಡಿದ್ದರು. ಇದಲ್ಲದೇ ಮೀನು ಸಾಕಾಣಿಕೆಗೆ ಬೇಕಾದ ಸಾಮಗ್ರಿಗಳನ್ನು ರೈತರಿಗೆ ನೀಡುತ್ತಿದ್ದರು. ಯೋಹಾನ್ ಅರವಿಂದ್ ಅವರ ಈ ಕಾರ್ಯದಿಂದಾಗಿ ಪ್ರಸ್ತುತ ಭಾವ್ರೆ ಹಾಗೂ ಸುತ್ತಮುತ್ತಲಿನ ಅನೇಕ ಗ್ರಾಮಗಳ ರೈತರು ಮೀನು ಕೃಷಿಯತ್ತ ಮುಖ ಮಾಡಿದ್ದಾರೆ. ಈ ಕಾರ್ಯದಿಂದ ಯೋಹಾನ್ ಅರವಿಂದ್ ಅವರು ಮಹಾರಾಷ್ಟ್ರ ಮಾತ್ರವಲ್ಲದೇ ಕೇಂದ್ರ ಸರ್ಕಾರದ ಮೆಚ್ಚುಗೆಗೂ ಪಾತ್ರರಾದರು.
ಇದನ್ನೂ ಓದಿ: ಮೂರು ಗುಡಿಸಲುಗಳ ತಾಂಡಾ: 20 ಕುಟುಂಬ, 60 ಜನರಿರುವ ಒಂದು ಹಳ್ಳಿಯ ಕಥೆ: ಸ್ವಾವಲಂಬನೆಯ ಯಶೋಗಾಥೆ
ಮಹಾರಾಷ್ಟ್ರ ರಾಜ್ಯದ ಮೀನುಗಾರಿಕಾ ಇಲಾಖೆಯ ಜಂಟಿ ಆಯುಕ್ತರು ಮೀನು ಕೃಷಿಯಲ್ಲಿ ಯೋಹಾನ್ ಅರವಿಂದ್ ಅವರ ಸಾಧನೆಯನ್ನು ಗುರುತಿಸಿ, ಈ ಯಶಸ್ಸಿನ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ನಂತರ ಕೇಂದ್ರ ಸರ್ಕಾರ ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳ ಗೌರವಕ್ಕಾಗಿ ಯೋಹಾನ್ ಅರವಿಂದ್ ಅವರನ್ನು ಆಹ್ವಾನಿಸಲಾಯಿತು. ಇತ್ತೀಚೆಗೆ ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್ ಮತ್ತು ಜಿಲ್ಲಾಧಿಕಾರಿ ಮಿತ್ತಲಿ ಸೇಥಿ ಕೂಡ ಭಾವ್ರೆಗೆ ಭೇಟಿ ನೀಡಿ ಯೋಹಾನ್ ಅರವಿಂದ್ ಅವರನ್ನು ಶ್ಲಾಘಿಸಿದ್ದರು.
ಅಂಚೆ ಇಲಾಖೆಯ ಇನ್ಸ್‌ಪೆಕ್ಟರ್ ಭರತ್ ಚೌಧರಿ ಮತ್ತು ಪೋಸ್ಟ್‌ಮ್ಯಾನ್ ಸುನಿಲ್ ಗಾವಿತ್ ಅವರು ರಾಷ್ಟ್ರಪತಿ ಗೌರವಕ್ಕಾಗಿ ಬಂದ ಆಹ್ವಾನ ಪತ್ರವನ್ನು ಯೋಹಾನ್ ಅರವಿಂದ್ಗೆ ನೀಡಿದರು. ಈ ಆಹ್ವಾನ ಪತ್ರವನ್ನು ಸ್ವೀಕರಿಸುವಾಗ ಯೋಹಾನ್ ಅರವಿಂದ್ ಮತ್ತು ಅವರ ಪತ್ನಿ ಯಶೋದಾ ಗವಿತ್ ಸಂತಸಕ್ಕೆ ಪಾರವೇ ಇರಲಿಲ್ಲ.
ಯೋಹಾನ್ ಅರವಿಂದ್ ಪ್ರತಿಕ್ರಿಯಿಸಿ, "ಇದು ನಮಗೆ ಗೌರವ ಮಾತ್ರವಲ್ಲ, ನಮ್ಮ ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ. ಸರ್ಕಾರದ ಸಹಾಯಧನವನ್ನು ಸರಿಯಾಗಿ ಬಳಸಿಕೊಂಡು ಉದ್ಯಮ ನಡೆಸಿದರೆ ಕುಟುಂಬ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸಿದ್ದೇನೆ" ಎಂದು ಹೇಳಿದರು.
ಇದನ್ನೂ ಓದಿ: ಕಿತ್ತಳೆಗೆ ಬೇಡಿಕೆ ಬರಬೇಕಾದರೆ ರೈತರಲ್ಲಿ ಇರುವ ಈ ತಪ್ಪು ತಿಳಿವಳಿಕೆ ಹೋಗಬೇಕಿದೆ; ತಜ್ಞರು