ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ-2025ರಲ್ಲಿ 50 ಕೋಟಿಗೂ ಹೆಚ್ಚು ಜನರು ಭಾಗಿಯಾಗಿ ಪವಿತ್ರ ಸ್ನಾನ ಮಾಡಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ ವಿವಿಧ ಕ್ಷೇತ್ರಗಳ ಗಣ್ಯರು, ವಿದೇಶಿಗಳು ಕೂಡಾ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಸಿನಿ ಸೆಲೆಬ್ರಿಟಿಗಳೂ ಇದರಿಂದ ಹೊರತಲ್ಲ.
ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿರುವ ವೈಷ್ಣವಿ ಗೌಡ ಮಹಾ ಕುಂಭಮೇಳದಲ್ಲಿ ಭಾಗಿಯಾಗಿ, ಪವಿತ್ರ ಸ್ನಾನ ಮಾಡಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಜನ್ಮದಿನ ಆಚರಿಸಿಕೊಂಡಿರುವ ನಟಿ, ಇಂದು ಮಹಾ ಕುಂಭಮೇಳದ ಪೋಸ್ಟ್ ಹಂಚಿಕೊಂಡು ಧನ್ಯ ಎಂಬರ್ಥದ ಕ್ಯಾಪ್ಷನ್ ಕೊಟ್ಟಿದ್ದಾರೆ.
''ಮಹಾ ಕುಂಭಮೇಳ (ಕೈ ಜೋಡಿಸಿರುವ ಇಮೋಜಿಯೊಂದಿಗೆ), ನನ್ನ ಹುಟ್ಟುಹಬ್ಬವನ್ನು ಇಲ್ಲಿ ಆಚರಿಸಿಕೊಂಡಿದ್ದಕ್ಕೆ ಕೃತಜ್ಞಳಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿಯ ಶುಭಾಶಯಗಳಿಗೆ ಧನ್ಯವಾದಗಳು. ನಿಮ್ಮ ಶುಭ ಹಾರೈಕೆಗಳು ನಿಜವಾಗಿಯೂ ನನ್ನ ಜನ್ಮದಿನವನ್ನು ವಿಶೇಷವಾಗಿಸಿದೆ.'' - ನಟಿ ವೈಷ್ಣವಿ ಗೌಡ.
ಇದೇ ಫೆಬ್ರವರಿ 20ರಂದು ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ತಮ್ಮ 33ನೇ ಜನ್ಮದಿನ ಆಚರಿಸಿಕೊಂಡರು. ಆ ಸಂದರ್ಭವೇ ನಟಿ ಪ್ರಯಾಗ್ರಾಜ್ ಪ್ರವಾಸ ಕೈಗೊಂಡಿದ್ದರು. ಆದ್ರೆ ಫೋಟೋಗಳನ್ನು ಕೊಂಚ ತಡವಾಗಿ ಹಂಚಿಕೊಂಡಿದ್ದಾರೆ.
ಮೊದಲ ಫೋಟೋದಲ್ಲಿ ನದಿಯಲ್ಲಿ ಮಿಂದೆದ್ದಿರುವ ಫೋಟೋ ಇದ್ದರೆ, ಮತ್ತೊಂದರಲ್ಲಿ ನಟಿಯ ಹಣೆಯಲ್ಲಿ ಅರಿಶಿಣ ಕುಂಕುಮವನ್ನು ಕಾಣಬಹುದು. ಸೀರೆಯಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದು, ಎರಡರಲ್ಲೂ ನಗುಮೊಗದಲ್ಲಿ ಚೆಲುವನ್ನು ಪ್ರದರ್ಶಿಸಿದ್ದಾರೆ. ಫೋಟೋಗಳಿಗೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.