75ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಾರತ ಸರ್ಕಾರ ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳನ್ನು ಗುರುವಾರ ಪ್ರಕಟಿಸಿದೆ. ದಕ್ಷಿಣ ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಭಾರತೀಯ ಚಲನಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ 'ಪದ್ಮವಿಭೂಷಣ' ಪ್ರಶಸ್ತಿ ಘೋಷಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶದ ಮೂಲಕ ಮೆಗಾಸ್ಟಾರ್ ಧನ್ಯವಾದ ಅರ್ಪಿಸಿದ್ದಾರೆ.
''ಈ ಸುದ್ದಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯುತ್ತಿಲ್ಲ. ಬಹಳ ಸಂತೋಷವಾಗಿದೆ. ಕೃತಜ್ಞನಾಗಿದ್ದೇನೆ. ನಮಗೆ ರಕ್ತ ಸಂಬಂಧವಿಲ್ಲದಿದ್ದರೂ ನೀವು (ಅಭಿಮಾನಿಗಳು) ಯಾವಾಗಲೂ ನನ್ನನ್ನು ಪ್ರೀತಿಸಿದಿರಿ, ನನ್ನನ್ನು ಅಣ್ಣ ಎಂದು ಕರೆದಿರಿ ಮತ್ತು ನಿಮ್ಮ ಕುಟುಂಬದ ಸದಸ್ಯರಂತೆ ನಡೆಸಿಕೊಂಡಿದ್ದೀರಿ. ಇಷ್ಟು ವರ್ಷಗಳಲ್ಲಿ ನನ್ನನ್ನು ಬೆಂಬಲಿಸಿದ ಮತ್ತು ಪ್ರೀತಿಸಿದ ನನ್ನ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ಈ ಗೌರವಕ್ಕಾಗಿ ಮತ್ತು ದೇಶದ ಎರಡನೇ ಅತ್ಯಂತ ಪ್ರತಿಷ್ಠಿತ ಗೌರವಕ್ಕೆ ಪಾತ್ರನಾಗುತ್ತಿರುವುದಕ್ಕಾಗಿ ಕೃತಜ್ಞ. ನನ್ನ 45 ವರ್ಷಗಳ ವೃತ್ತಿಜೀವನದಲ್ಲಿ ನಿಮ್ಮೆಲ್ಲರನ್ನೂ ರಂಜಿಸಲು ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದೇನೆ. ವೈಯಕ್ತಿಕ ಜೀವನದಲ್ಲಿ ಯಾವಾಗಲೂ ನನ್ನ ಸುತ್ತಮುತ್ತಲಿನವರಿಗೆ ಒಳ್ಳೆಯದನ್ನೇ ಮಾಡಲು ಪ್ರಯತ್ನಿಸಿದ್ದೇನೆ. ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು" ಎಂದು ತಿಳಿಸಿದ್ದಾರೆ.
67ರ ಹರೆಯದ ನಟ ದಕ್ಷಿಣ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸಿನಿಮಾ ಕ್ಷೇತ್ರಕ್ಕೆ ಅವರ ಗಮನಾರ್ಹ ಕೊಡುಗೆಗಳು ಮತ್ತು ಸಮಾಜ ಸೇವೆಯನ್ನು ಹುಡುಕಿ ಈ ಹಿಂದೆ ಬಂದಿದ್ದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಇದೀಗ ಸರ್ಕಾರ ಅವರಿಗೆ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿದೆ. ಈ ವಿಚಾರ ತಿಳಿದ ಅಪಾರ ಸಂಖ್ಯೆಯ ಅಭಿಮಾನಿಗಳು ನಟನಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.